ನವದೆಹಲಿ: ದೇಶ ಆರ್ಥಿಕತೆಗೆ ಪ್ರಾಮುಖ್ಯತೆ ನೀಡುವುದರ ಜೊತೆಗೆ ಕೊರೊನಾ ವೈರಸ್ ವಿರುದ್ಧದ ಹೋರಾಟವನ್ನು ಮುಂದುವರೆಸಬೇಕಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಮುಖ್ಯಮಂತ್ರಿಗಳಿಗೆ ತಿಳಿಸಿದ್ದಾರೆ.
ಮುಖ್ಯಮಂತ್ರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ ಪ್ರದಾನಿ ಮೋದಿ, ಕೊರೊನಾ ವೈರಸ್ ಹಾಟ್‌ಸ್ಪಾಟ್ ವಲಯಗಳಲ್ಲಿ ನಿಗದಿತ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವಂತೆ ರಾಜ್ಯಗಳಿಗೆ ತಿಳಿಸಿದ್ದಾರೆ. ಕಳೆದ ಒಂದೂವರೆ ತಿಂಗಳಲ್ಲಿ ಸಾವಿರಾರು ಜೀವಗಳನ್ನು ಉಳಿಸುವಲ್ಲಿ ದೇಶವು ಯಶಸ್ವಿಯಾಗಿದ್ದು, ಲಾಕ್‌ಡೌನ್ ಸಕಾರಾತ್ಮಕ ಫಲಿತಾಂಶಗಳನ್ನು ನೀಡಿದೆ ಎಂದಿದ್ದಾರೆ.
ದೇಶವು ಇಲ್ಲಿಯವರೆಗೆ ಎರಡು ಲಾಕ್‌ಡೌನ್‌ಗಳನ್ನು ಕಂಡಿದೆ, ಎರಡೂ ಕೆಲವು ಅಂಶಗಳಲ್ಲಿ ವಿಭಿನ್ನವಾಗಿವೆ. ಆದರೀಗ ನಾವು ಮುಂದಿನ ದಾರಿ ಬಗ್ಗೆ ಯೋಚಿಸಬೇಕಾಗಿದೆ ಎಂದು ಹೇಳಿದ್ದಾರೆ. ತಜ್ಞರ ಪ್ರಕಾರ ಕೊರೊನಾ ವೈರಸ್ ಪ್ರಭಾವವು ಮುಂದಿನ ತಿಂಗಳಲ್ಲಿ ಗೋಚರಿಸುತ್ತದೆ ಎಂದು ಮೋದಿ ಹೇಳಿದ್ದಾರೆ ಅಂತ ಕೇಂದ್ರ ಹೊರಡಿಸಿರುವ ಹೇಳಿಕೆಯಲ್ಲಿ ತಿಳಿಸಲಾಗಿದೆ.
ಮುಂದಿನ ದಿನಗಳಲ್ಲಿ ಮಾಸ್ಕ್ಗಳು ಮತ್ತು ಫೇಸ್ ಕವರ್ಗಳು ಜನರ ಜೀವನದ ಭಾಗವಾಗಲಿವೆ ಎಂದು ಮೋದಿ ಹೇಳಿದ್ದಾರೆ. ವಿಡಿಯೋ ಕಾನ್ಫರೆನ್ಸ್ನಲ್ಲಿ ಮುಖ್ಯಮಂತ್ರಿಗಳಲ್ಲದೇ ಗೃಹ ಸಚಿವ ಅಮಿತ್ ಶಾ, ಆರೋಗ್ಯ ಸಚಿವ ಹರ್ಷವರ್ಧನ್, ಪ್ರಧಾನಮಂತ್ರಿ ಮತ್ತು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು ಭಾಗವಹಿಸಿದ್ದರು.