ಮುಂಬೈ: ಬಾಲಿವುಡ್ನ ಉದಯೋನ್ಮುಖ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಹಾಗೂ ಡ್ರಗ್ಸ್ ಪ್ರಕರಣದಲ್ಲಿ ಆರೋಪಿಯಾಗಿರುವ ನಟಿ ರಿಯಾ ಅವರನ್ನ ಸದ್ಯ ಮುಂಬೈನ ಬೈಕುಲಾ ಜೈಲಿನಲ್ಲಿ ಇರಿಸಲಾಗಿದೆ.
ಇವರನ್ನ ಮಹಿಳಾ ಸೇಲ್ನಲ್ಲಿಡಲಾಗಿದ್ದು, ಇದರಲ್ಲಿ ಶೀನಾ ಬೋರಾ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಇಂದ್ರಾಣಿ ಮುಖರ್ಜಿ, ಕೊರೆಗಾಂವ್ ಭೀಮಾ ಕೇಸ್ನ ಆರೋಪಿ ಸುಧಾ ಭಾರದ್ವಾಜ್ ಕೂಡ ಇದ್ದಾರೆ.
ಸತತ ಮೂರು ದಿನಗಳ ವಿಚಾರಣೆ ಬಳಿಕ ನಿನ್ನೆ ಸಂಜೆ ಮಾದಕ ವಸ್ತು ನಿಯಂತ್ರಣ ಸಂಸ್ಥೆ(ಎನ್ಸಿಬಿ) ರಿಯಾ ಚಕ್ರವರ್ತಿಯವರನ್ನ ಹೆಚ್ಚಿನ ವಿಚಾರಣೆಗೋಸ್ಕರ ವಶಕ್ಕೆ ಪಡೆದುಕೊಂಡಿತ್ತು. ಇದಾದ ಬಳಿಕ ಕೋರ್ಟ್ ಸೆಪ್ಟೆಂಬರ್ 22ರವರೆಗೆ ಅವರನ್ನ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಬೈಕುಲಾ ಜೈಲಿನಲ್ಲಿ ನಟಿ ರಿಯಾ ಚಕ್ರವರ್ತಿ
ಇದರ ಮಧ್ಯೆ ಅವರು ಮುಂಬೈನ ಸೆಷನ್ಸ್ ಕೋರ್ಟ್ನಲ್ಲಿ ಜಾಮೀನು ಅರ್ಜಿ ಸಲ್ಲಿಕೆ ಮಾಡಿದ್ದು, ಅದರ ವಿಚಾರಣೆ ನಾಳೆ ನಡೆಯಲಿದೆ. ಈಗಾಗಲೇ ರಿಯಾ ಚಕ್ರವರ್ತಿ ಸಹೋದರ ಸೋವಿಕ್ ಚಕ್ರವರ್ತಿ, ಸುಶಾಂತ್ ಮನೆಯ ಮ್ಯಾನೇಜರ್ ಸ್ಯಾಮುಯೆಲ್ ಮಿರಾಂಡ, ಮನೆ ಸಹಾಯಕ ದೀಪೇಶ್ ಸಾವಂತ್ ಅವರು ಪೊಲೀಸ್ ವಶದಲ್ಲಿದ್ದಾರೆ.
ಜೂನ್ 14ರಂದು ಮುಂಬೈನ ಬಾಂದ್ರಾ ನಿವಾಸದಲ್ಲಿ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆಗೆ ಶರಣಾಗಿದ್ದು, ಇದಾದ ಬಳಿಕ ಜುಲೈ 25ರಂದು ನಟಿ ವಿರುದ್ಧ ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ತದನಂತರ ಜುಲೈ 31ರಂದು ಸುಶಾಂತ್ ಸಿಂಗ್ ಬ್ಯಾಂಕ್ ಖಾತೆಯಿಂದ ರಿಯಾ ಅಕೌಂಟ್ಗೆ ಹಣ ವರ್ಗಾವಣೆಗೊಂಡಿದೆ ಎಂಬ ಆರೋಪ ಸಹ ಕೇಳಿ ಬಂದಿತ್ತು. ಇದಾದ ಬಳಿಕ ಜಾರಿ ನಿರ್ದೇಶನಾಲಯ ಇವರನ್ನ ವಿಚಾರಣೆ ನಡೆಸಿತ್ತು. ಇದರ ಬೆನ್ನಲ್ಲೇ ಸಾವಿನ ತನಿಖೆಯನ್ನ ಸಿಬಿಐ ನಡೆಸುವಂತೆ ಸುಪ್ರೀಂಕೋರ್ಟ್ ಮಹತ್ವದ ವಿಚಾರಣೆ ಹೊರಡಿಸಿತ್ತು.