ನವದೆಹಲಿ: ರಾಹುಲ್ ಗಾಂಧಿ, 'ರಾಷ್ಟ್ರವನ್ನು ವಿಭಜಿಸಲು' ಮತ್ತು 'ಸಶಸ್ತ್ರ ಪಡೆಗಳನ್ನು ನಿರಾಶೆಗೊಳಿಸಲು' ಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಆರೋಪಿಸಿದ್ದಾರೆ.
ಪೂರ್ವ ಲಡಾಖ್ನ ಗಾಲ್ವಾನ್ ಕಣಿವೆಯಲ್ಲಿ ನಡೆದ ಸಂಘರ್ಷದ ವಿಚಾರವಾಗಿ ಕೇಂದ್ರ ಸರ್ಕಾರವನ್ನು ದೂಷಿಸುತ್ತಾ ಬಂದಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ನಡ್ಡಾ ತಿರುಗೇಟು ನೀಡಿದ್ದಾರೆ. 2008ರಲ್ಲಿ ಚೀನಾದೊಂದಿಗೆ ಕಾಂಗ್ರೆಸ್ ಮಾಡಿಕೊಂಡ ಒಡಂಬಡಿಕೆಯ ಪರಿಣಾಮ ಇಂದು ಈ ಪರಿಸ್ಥಿತಿ ಬಂದೊದಗಿದೆ ಎಂದು ಅವರು ಹೇಳಿದ್ದಾರೆ.
"ಕಾಂಗ್ರೆಸ್ ಈ ಮೊದಲೇ ಚೀನಾ ಕಮ್ಯುನಿಸ್ಟ್ ಪಕ್ಷದೊಂದಿಗೆ ಕಾಂಗ್ರೆಸ್, ಮೆಮರಂಡಮ್ ಆಫ್ ಅಂಡರ್‌ಸ್ಟ್ಯಾಂಡಿಂಗ್ (ಕಾನೂನಾತ್ಮಕವಲ್ಲದ ದ್ವಿಪಕ್ಷೀಯ ಒಪ್ಪಂದ)ಗೆ ಸಹಿ ಹಾಕಿದೆ. ಬಳಿಕ ಚೀನಾಗೆ ಭಾರತದ ಭೂಭಾಗವನ್ನ ನೀಡಿದೆ. ಡೋಕ್ಲಾಮ್ ವಿವಾದದ ವೇಳೆ ರಾಹುಲ್ ಗಾಂಧಿ ರಹಸ್ಯವಾಗಿ ಚೀನಾದ ರಾಯಭಾರ ಕಚೇರಿಗೆ ಭೇಟಿ ನೀಡಿದ್ದರು. ಇದೀಗ ಗಡಿ ಬಿಕ್ಕಟ್ಟಿನ ಸಂದರ್ಭದಲ್ಲಿ ತಮ್ಮ ಹೇಳಿಕೆಗಳ ಮೂಲಕ ರಾಷ್ಟ್ರವನ್ನು ವಿಭಜಿಸಲು ಮತ್ತು ಸಶಸ್ತ್ರ ಪಡೆಗಳನ್ನು ನಿರಾಶೆಗೊಳಿಸಲು ಯತ್ನಿಸುತ್ತಿದ್ದಾರೆ " ಎಂದು ನಡ್ಡಾ ಟ್ವೀಟ್ ಮಾಡಿದ್ದಾರೆ.
2008 ರಲ್ಲಿ ಅಂದಿನ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಹುಲ್ ಗಾಂಧಿ ಹಾಗೂ ಅಂದಿನ ಕಮ್ಯುನಿಸ್ಟ್ ಪಕ್ಷದ ಹಿರಿಯ ಮುಖಂಡನಾಗಿದ್ದ ಇಂದಿನ ಚೀನಾದ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಅವರು ಮೆಮರಂಡಮ್ ಆಫ್ ಅಂಡರ್ಸ್ಟ್ಯಾಂಡಿಂಗ್ಗೆ ಸಹಿ ಹಾಕಿದ್ದರು.