ಹೈದರಾಬಾದ್ :ಭಾರತದ ಇತಿಹಾಸ ಪುಟದಲ್ಲಿ ಎಂದೂ ಮರೆಯದ ಘಟನೆ ಕಾರ್ಗಿಲ್ ಯುದ್ಧ. ಭಾರತದಲ್ಲಿ ಒಳನುಸುಳಿದ್ದ ಪಾಕಿಸ್ತಾನಿ ಸೈನಿಕರನ್ನು ಬಗ್ಗುಬಡಿದು, ಟೈಗರ್ ಹಿಲ್ ಮೇಲೆ ಮತ್ತೆ ತ್ರಿವರ್ಣ ಧ್ವಜ ನೆಟ್ಟ ನಮ್ಮ ಯೋಧರ ಶೌರ್ಯ ಎಂದೆಂದಿಗೂ ಅಮರ. 1999ರ ಮೇನಿಂದ ಜುಲೈ 26ರವರೆಗೆ ಕಾರ್ಗಿಲ್ ಯುದ್ಧ ನಡೆಯಿತು. ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆಯನ್ನು ಮೊದಲು ಗುರುತಿಸಿದ್ದು ಓರ್ವ ಕುರಿ ಕಾಯುವ ಹುಡುಗ.
ಕಾರ್ಗಿಲ್ ವಲಯದಲ್ಲಿ ಪಾಕಿಸ್ತಾನದ ಒಳನುಸುಳುವಿಕೆಯನ್ನು ಮೊದಲು ವರದಿ ಮಾಡಿದ್ದು ಸ್ಥಳೀಯ ಕುರಿ ಕಾಯುವ ಹುಡಗ, ತಾಶಿ ನಮ್‌ಗ್ಯಾಲ್. ಈತ ತನ್ನ ಕಾಣೆಯಾದ ಚಮರೀಮೃಗ (yak) ಅನ್ನು ಹುಡುಕುತ್ತಿದ್ದ. ಈ ವೇಳೆ ಪಾಕ್ ಒಳನುಸುಳುವಿಕೆಯನ್ನು ಗಮನಿಸಿದ್ದ. ಈ ಕುರಿತು ಹತ್ತಿರದ ಸೇನೆಗೆ ಮಾಹಿತಿ ನೀಡಿದ್ದನು. ಬಳಿಕ ಇದನ್ನು ಭಾರತೀಯ ಸೈನಿಕರು ಪರಿಶೀಲಿಸಿದಾಗ ಪಾಕ್ ಒಳನುಸುಳಿರುವುದು ಕನ್ಫರ್ಮ್ ಆಗಿತ್ತು.
ಯಾಕ್ ಹುಡುಕಲು ಹೋದಾಗ ಸಿಕ್ಕಿಬಿದ್ದ ಪಾಕ್ :
ಸಣ್ಣ ಗ್ರಾಮವಾದ ಗಾರ್ಖುನ್‌ನ ಮೂರು ಕುರಿ ಕಾಯುವ ಹುಡುಗರಾದ ತಾಶಿ ನಮ್‌ಗ್ಯಾಲ್, ಮೊರೂಪ್ ತ್ಸೆರಿಂಗ್ ಮತ್ತು ಅಲಿ ರಾಝಾ ಸ್ಟ್ಯಾನ್ಬಾ ಅವರು ತಮ್ಮ ಕುರಿಗಳ ಹಿಂಡುಗಳೊಂದಿಗೆ ಪರ್ವತದ ಮೇಲೆಕ್ಕೆ ಹೋಗುತ್ತಿದ್ದರು. ಕಾರ್ಗಿಲ್ ಪರ್ವತಗಳಲ್ಲಿನ ಕುರುಬರು ವಾಡಿಕೆಯಂತೆ ತಮ್ಮ ಜಾನುವಾರುಗಳನ್ನು ಒಟ್ಟುಗೂಡಿಸುತ್ತಾರೆ. ಎರಡು ಅಥವಾ ಮೂರು ಜನ ಒಟ್ಟಿಗೆ ತಮ್ಮ ಜಾನುವಾರುಗಳ ಗುಂಪುಗಳನ್ನು ಹುಲ್ಲುಗಾವಲುಗಳಲ್ಲಿ ಮೇಯಿಸಲು ತಿರುಗುತ್ತಾರೆ. ಈ ವೇಳೆ ಪರ್ವತದಲ್ಲಿರುವ ಮೇಕೆಗಳನ್ನು ಬೇಟೆಯಾಡುವುದು ಅವರ ರೂಢಿ. ಇದಕ್ಕಾಗಿ ಮೊರೂಪ್ ತ್ಸೆರಿಂಗ್ ಬೈನಾಕುಲರ್ ಒಂದನ್ನು ಖರೀದಿಸಿದ್ದ.
ಮೇ 3 ರ ಬೆಳಿಗ್ಗೆ, ತಾಶಿ ನಮ್‌ಗ್ಯಾಲ್ ಜುಬ್ಬರ್ ಲಂಗ್ಪಾ [ನಲ್ಲಾಹೋರ್ ಪರ್ವತ ಶ್ರೇಣಿ] ದಲ್ಲಿ ಸುಮಾರು 5 ಕಿಲೋಮೀಟರ್ ದೂರ ಹೋಗಿದ್ದರು. ಈ ವೇಳೆ ಕಾಣೆಯಾದ ತನ್ನ ಯಾಕ್ ಅನ್ನು ಹುಡುಕಲು ತ್ಸೆರಿಂಗ್‌ನ ಬಳಿಯಿದ್ದ ಬೈನಾಕ್ಯುಲರ್‌ನಿಂದ ಪರ್ವತವನ್ನು ನೋಡುತ್ತಿದ್ದಾಗ, ಪಠಾಣ್ ಸೂಟ್ ಧರಿಸಿದ್ದ ಪುರುಷರ ಗುಂಪು ಭೂಮಿಯನ್ನು ಅಗೆದು ತಾತ್ಕಾಲಿಕ ಬಂಕರ್‌ಗಳನ್ನು ಹಾಕುತ್ತಿರುವುದನ್ನು ಗಮನಿಸಿದರು. ಈ ಕುರಿತು ಹತ್ತಿರದಲ್ಲಿದ್ದ ಪಂಜಾಬ್ ರೆಜಿಮೆಂಟ್‌ನ ಅಧಿಕಾರಿಗಳಿಗೆ ನಮ್‌ಗ್ಯಾಲ್ ತಕ್ಷಣ ಮಾಹಿತಿ ನೀಡಿದರು.
ತಾಶಿ ನಮ್‌ಗ್ಯಾಲ್ ಅನುಭವ :
ಈ ಕುರಿತು ಮಾತನಾಡಿದ್ದ ತಾಶಿ ನಮ್‌ಗ್ಯಾಲ್, ‘ಮೇ 3 ರ ಬೆಳಿಗ್ಗೆ, ನನ್ನ ಕಾಣೆಯಾದ ಯಾಕ್ ಅನ್ನು ಹುಡುಕಲು ನಾನು ಜುಬ್ಬರ್ ಲ್ಯಾಂಗ್ಪಾ ಹೊಳೆಯ ಉದ್ದಕ್ಕೂ 5 ಕಿ.ಮೀ ದೂರದಲ್ಲಿ ನನ್ನ ಸ್ನೇಹಿತರೊಡನೆ ಹೋಗಿದ್ದೆ. ನಾನು ಪರ್ವತ ಶ್ರೇಣಿಯನ್ನು ಬೈನಾಕ್ಯುಲರ್ ಮೂಲಕ ಸ್ಕ್ಯಾನ್ ಮಾಡುತ್ತಿದ್ದೆ. ಆಗ ನಾನು ಕೆಲ ಗುಂಪುಗಳನ್ನು ನೋಡಿದೆ. ಪಠಾಣ್ ವೇಷಭೂಷಣ ಧರಿಸಿದ್ದ ಅವರು, ಬಂಕರ್ ಅಗೆಯುವ ಪಾಕಿಸ್ತಾನಿ ಸೈನಿಕರಾಗಿದ್ದರು. ಅವರಲ್ಲಿ ಕೆಲವರು ಶಸ್ತ್ರಸಜ್ಜಿತರಾಗಿದ್ದರು. ಅವರು ಎಷ್ಟು ಜನರಿದ್ದಾರೆಂದು ಕಂಡು ಹಿಡಿಯಲು ನನಗೆ ಸಾಧ್ಯವಾಗಲಿಲ್ಲ. ಆದರೆ ಅವರು ಎಲ್ಒಸಿ ಅನ್ನು ದಾಟಿ ಒಳನುಸುಳಿದ್ದಾರೆ ಎಂಬುದು ನನಗೆ ಖಚಿತವಾಗಿತ್ತು ಎಂದು ಹೇಳಿದ್ದರು.
‘ನಾನು ಕೆಳಗಿಳಿದ ಕೂಡಲೇ ಭಾರತೀಯ ಸನಿಕರಿಗೆ ಮಾಹಿತಿ ನೀಡಿದೆ. ನನ್ನ ಮಾಹಿತಿಯು ಭಾರತೀಯ ಸೈನ್ಯವನ್ನು ಎಚ್ಚರಿಸಿತು. ಅವರು ಈ ಬಗ್ಗೆ ಪರಿಶೀಲಿಸಿದರು ಮತ್ತು ಪಾಕಿಸ್ತಾನಿ ಸೈನಿಕರ ಒಳನುಸುಳುವಿಕೆಯ ಬಗ್ಗೆ ನನ್ನ ಮಾಹಿತಿಯು ಸರಿಯಾಗಿದೆ ಎಂದರು’ ಅಂತ ತಾಶಿ ನಮ್‌ಗ್ಯಾಲ್ ತಿಳಿಸಿದ್ದರು.