ಮುಂಬೈ: ಅಗತ್ಯ ಸೇವೆಗಳ ವಲಯದಲ್ಲಿ ಕೆಲಸ ಮಾಡುವ ಕಾರ್ಮಿಕರು ಹಾಗೂ ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುವ ಕಾರ್ಮಿಕರಿಗಾಗಿ ಮುಂಬೈನಲ್ಲಿ ಇಂದಿನಿಂದ ಲೋಕಲ್ ರೈಲುಗಳು ಸಂಚರಿಸಲಿವೆ.
ಮಾರ್ಚ್ನಿಂದ ರೈಲು ಸೇವೆಯನ್ನು ರದ್ದು ಮಾಡಲಾಗಿದ್ದು, ಸುಮಾರು ಎರಡೂವರೆ ತಿಂಗಳ ನಂತರ ರೈಲು ಸೇವೆ ಆರಂಭವಾಗಲಿದೆ ಎಂದು ಕೇಂದ್ರ ಮತ್ತು ಪಶ್ಚಿಮ ರೈಲ್ವೆ ಹಾಗೂ ಬೃಹನ್ ಮುಂಬೈ ಮಹಾನಗರ ಪಾಲಿಕೆ ಘೋಷಿಸಿವೆ.
ಪಶ್ಚಿಮ ರೈಲ್ವೆ 73 ಜೋಡಿ ಉಪನಗರ ರೈಲ್ವೆ ಸೇವೆ ಒದಗಿಸಲಿದ್ದು, ಇದರಲ್ಲಿ ರೈಲುಗಳು ವಿಹಾರ್ ಹಾಗೂ ದಹನು ನಗರಗಳ ಮಾರ್ಗದಲ್ಲಿ ಓಡಾಡಲಿವೆ.
ಕೇಂದ್ರಿಯ ರೈಲ್ವೆ ಸುಮಾರು 200 ರೈಲುಗಳ ಮೂಲಕ ಹಾಗೂ ಪಶ್ಚಿಮ ರೈಲ್ವೆ 120 ಟ್ರೇನ್ಗಳ ಮೂಲಕ ಕಾರ್ಯಾಚರಣೆ ನಡೆಸಲಿವೆ. ಈ ರೈಲುಗಳು ಸಿಎಂಎಸ್ಟಿ ಇಂದ ಕಸರಾ, ಕರ್ಜಾತ್, ಕಲ್ಯಾಣ್, ಥಾಣೆ ಮಾರ್ಗವಾಗಿ ಸಂಚರಿಸಲಿವೆ.
ಈ ರೈಲುಗಳಲ್ಲಿ ಅಗತ್ಯ ಸೇವೆಗಳ ವಲಯದಲ್ಲಿರುವ 1.25 ಲಕ್ಷ ಮಂದಿ ಪ್ರತಿದಿನ ಸಂಚಾರ ಮಾಡಬಹುದು ಎಂದು ಅಂದಾಜಿಸಲಾಗಿದೆ. ಈ ಉದ್ಯೋಗಿಗಳಲ್ಲಿ 50 ಸಾವಿರ ಸಿಬ್ಬಂದಿ ಪಶ್ಚಿಮ ರೈಲ್ವೆಗೆ ಸೇರಿದ್ದಾರೆ.
ಅಗತ್ಯ ಸೇವೆ ಹೊರತುಪಡಿಸಿ ಇರುವ ಬೇರೆ ಸಾರ್ವಜನಿಕರಿಗೆ ಕಡ್ಡಾಯವಾಗಿ ರೈಲ್ವೆ ಪ್ರಯಾಣ ನಿರ್ಬಂಧ ಮಾಡಲಾಗಿದೆ. ಜೊತೆಗೆ ಸಾಮಾಜಿಕ ಅಂತರ, ಸ್ಯಾನಿಟೈಸಿಂಗ್ ಹಾಗೂ ಟಿಕೆಟ್ ಕೌಂಟರ್ಗಳಲ್ಲಿ ಟಿಕೆಟ್ ವಿತರಕರು ಪಿಪಿಇ ಕಿಟ್ಗಳನ್ನು ಧರಿಸುವುದು ಕಡ್ಡಾಯ ಮಾಡಲಾಗಿದೆ.