ನವದೆಹಲಿ: ಕೊರೊನಾ ವೈರಸ್ ಹಿನ್ನೆಲೆ ರಾಜಧಾನಿ ದೆಹಲಿಯ ಮೊಘಲ್ ಉದ್ಯಾನವನವನ್ನು ಮಾರ್ಚ್ 7 ರಿಂದ ಸಾರ್ವಜನಿಕರ ವೀಕ್ಷಣೆಗೆ ಮುಚ್ಚಲಾಗುತ್ತಿದೆ.
ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಮೊಘಲ್ ಉದ್ಯಾನವನವನ್ನು ಮಾರ್ಚ್ 7 ರಿಂದ ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ ಎಂದು ಹೇಳಿದ್ದಾರೆ. ದೇಶದಲ್ಲಿ ಈವರೆಗೆ 30 ಜನರಿಗೆ ಈ ವೈರಸ್ ತಗುಲಿರುವ ಹಿನ್ನೆಲೆ ಮುಂದಿನ ಸಂಭವನೀಯ ಅಪಾಯ ತಪ್ಪಿಸಲು ಈ ನಿರ್ಧಾರ ಕೈಗೊಳ್ಳಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಹರ್ಷವರ್ಧನ್ ಅವರೂ ಕೂಡ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ಜನವರಿ 17 ರಿಂದಲೇ ನಾವು ಎಲ್ಲಾ ರೀತಿಯ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದ್ದೇವೆ. ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ಬಿಹಾರದಿಂದ ಗಡಿಗಳಲ್ಲಿ ನಮ್ಮ ತಂಡ ಈ ಬಗ್ಗೆ ಕಾರ್ಯೋನ್ಮುಖವಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ಹಿಂಸಾಚಾರ ಮತ್ತು ಕೊರೊನಾ ವೈರಸ್ ಹರಡುವಿಕೆಯ ದೃಷ್ಟಿಯಿಂದ ಹೋಳಿ ಆಚರಿಸುವುದಿಲ್ಲ ಎಂದು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಕೂಡ ಹೇಳಿದ್ದಾರೆ. ಪ್ರಧಾನಿ ಮೋದಿ ಕೂಡ ಹೋಳಿ ಸಂಭ್ರಮದಲ್ಲಿ ಭಾಗಿಯಾಗುವುದಿಲ್ಲ ಎಂದು ತಿಳಿಸಿದ್ದಾರೆ. ಕೊರೊನಾ ವೈರಸ್ ಇದುವರೆಗೆ ಪ್ರಪಂಚದಾದ್ಯಂತ 3200 ಕ್ಕೂ ಹೆಚ್ಚು ಜನರನ್ನು ಬಲಿಪಡೆದುಕೊಂಡಿದೆ.