ಭೋಪಾಲ್ (ಮಧ್ಯಪ್ರದೇಶ) :ರಾಜ್ಯದಲ್ಲಿ ಕೊರೊನಾ ವೈರಸ್ ಹರಡುವುದನ್ನು ನಿಯಂತ್ರಿಸಲು ಮಧ್ಯಪ್ರದೇಶ ಸರ್ಕಾರವು ಜುಲೈ 1ರಿಂದ 'ಕಿಲ್ ಕೊರೊನಾ' ಅಭಿಯಾನವನ್ನು ಪ್ರಾರಂಭಿಸುತ್ತದೆ.
ಈ ಅಭಿಯಾನದಡಿಯಲ್ಲಿ ಮನೆ-ಮನೆಗೆ ಸಮೀಕ್ಷೆ ನಡೆಸಲಾಗುವುದು ಮತ್ತು ನಾಗರಿಕರ ಮೇಲೆ ಇತರ ಪರೀಕ್ಷೆಗಳನ್ನೂ ಸಹ ಮಾಡಲಾಗುವುದು ಎಂದು ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರು ಕೋವಿಡ್-19 ಸಾಂಕ್ರಾಮಿಕ ರೋಗದ ಬಗ್ಗೆ ವಾಸ್ತವ ವಿಮರ್ಶೆ ಸಭೆಯಲ್ಲಿ ತಿಳಿಸಿದರು. 15 ದಿನಗಳ ಈ ಅಭಿಯಾನದಲ್ಲಿ 2.5 ಲಕ್ಷ ಟೆಸ್ಟ್ ನಡೆಸಲಾಗುವುದು. ಪ್ರತಿದಿನ 15 ಸಾವಿರದಿಂದ 20 ಸಾವಿರ ಮಾದರಿ ಸಂಗ್ರಹಿಸಲಾಗುವುದು ಎಂದು ಚೌಹಾಣ್ ಹೇಳಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಪರೀಕ್ಷಾ ಸಾಮರ್ಥ್ಯವನ್ನು ದ್ವಿಗುಣಗೊಳಿಸಿ 10 ಲಕ್ಷ ಜನರಿಗೆ 4,000 ದಿಂದ 8,000ಕ್ಕೆ ಏರಿಸಲಾಗುವುದು ಎಂದು ಅವರು ಹೇಳಿದರು. ರಾಜ್ಯದಲ್ಲಿ ಕೋವಿಡ್-19 ಚೇತರಿಕೆಯ ಪ್ರಮಾಣವು ಶೇ.76.9 ರಷ್ಟಿದ್ರೆ, ರಾಷ್ಟ್ರೀಯ ಚೇತರಿಕೆ ಪ್ರಮಾಣವು ಶೇ.58.1 ಎಂದು ಚೌಹಾಣ್ ಹೇಳಿದ್ದಾರೆ.
ರಾಜ್ಯದಲ್ಲಿ ಕೋವಿಡ್-19 ಬೆಳವಣಿಗೆಯ ದರವು ಪ್ರತಿ ದಿನ ಶೇ.1.44 ರಷ್ಟಿದೆ. ಇದು ರಾಷ್ಟ್ರೀಯ ಸರಾಸರಿ ಶೇ.3.69ರ ಅರ್ಧಕ್ಕಿಂತ ಕಡಿಮೆಯಾಗಿದೆ ಎಂದು ಅವರು ಹೇಳಿದರು. ರಾಜ್ಯದಲ್ಲಿ ವೈರಸ್ ಸಕಾರಾತ್ಮಕ ಪ್ರಮಾಣವು ಶೇ. 3.85ರಷ್ಟಿದ್ದು, ರಾಷ್ಟ್ರೀಯ ಸಕಾರಾತ್ಮಕ ದರವು ಶೇ.6.54ರಷ್ಟಿದೆ ಎಂದು ಮುಖ್ಯಮಂತ್ರಿ ಹೇಳಿದರು. ಶನಿವಾರದವರೆಗೆ ಮಧ್ಯಪ್ರದೇಶದಲ್ಲಿ 12,965 ಕೋವಿಡ್ -19 ಪ್ರಕರಣ ಮತ್ತು 550 ಸಾವು ವರದಿಯಾಗಿವೆ.