ಬಹರಾಂಪುರ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಪಾಪಿ ತಾಯಿಯೊಬ್ಬಳು 40 ದಿನದ ಹೆಣ್ಣು ಮಗುವಿನ ನಾಲಿಗೆ ಕತ್ತರಿಸಿ, ಕೊಲೆ ಮಾಡಿರುವ ಅಮಾನವೀಯ ಘಟನೆ ನಡೆದಿದ್ದು, ಆಕೆಯ ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
40 ದಿನದ ಮಗುವಿನ ನಾಲಿಗೆ ಕತ್ತರಿಸಿ ಕೊಲೆ ಮಾಡಿದ ಪಾಪಿ ತಾಯಿ! - ಪಶ್ಚಿಮ ಬಂಗಾಳದಲ್ಲಿ ಮಗುವಿನ ಕೊಲೆ ಮಾಡಿದ ತಾಯಿ
ಹುಟ್ಟಿದ ಮಗು ಹೆಣ್ಣು ಎಂದು ಮಾನಸಿಕ ತೊಂದರೆಗೊಳಗಾದ ಮಹಿಳೆಯೊಬ್ಬರು ಆ ಹಸುಳೆಯ ನಾಲಿಗೆ ಕತ್ತರಿಸಿ ಕೊಲೆ ಮಾಡಿರುವ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.
ಬಹರಾಂಪುರ ಪೊಲೀಸ್ ಠಾಣೆಯ ರಘುನಾಥ್ಪುರ್ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಇಂದು ಬೆಳಗ್ಗೆ ಮಗುವನ್ನ ಸ್ನಾನ ಮಾಡಿಸಲು ಬಾತ್ರೂಮ್ಗೆ ತೆಗೆದುಕೊಂಡು ಹೋಗಿ ಅದರ ನಾಲಿಗೆ ಕತ್ತರಿಸಿದ್ದಾಳೆ. ಇದಾದ ಬಳಿಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾಳೆ. ಆದರೆ, ಗ್ರಾಮಸ್ಥರು ಆಕೆಯನ್ನ ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಕುಟುಂಬಸ್ಥರು ಕಳೆದ ಕೆಲ ದಿನಗಳಿಂದ ಆಕೆ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದಳು ಎಂದಿದ್ದಾರೆ. ಈ ನಡುವೆ, ಅದು ಹೆಣ್ಣು ಮಗುವಾದ ಕಾರಣ ಕೊಲೆ ಮಾಡಿದ್ದಾಳೆ ಎಂದು ಕೆಲವರು ಮಾತನಾಡಿಕೊಳ್ಳುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈಗಾಗಲೇ ಎರಡು ವರ್ಷಗಳ ಹಿಂದೆ ಮಹಿಳೆ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಳಂತೆ. ಆದರೆ ಅದು ಸಾವನ್ನಪ್ಪಿತ್ತು. ಈಗಲೂ ಹೆಣ್ಣು ಮಗುವಿಗೆ ಜನ್ಮ ನೀಡಿದ್ದರಿಂದ ಆಕೆ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದಳು ಎನ್ನಲಾಗುತ್ತಿದೆ.