ಮ್ಯಾಡ್ರಿಡ್: ಸ್ಪೇನ್ನಲ್ಲಿ ಕೊರೊನಾ ಹಾವಳಿ ತೀವ್ರವಾಗಿದೆ. ಅಲ್ಲಿನ ವೈದ್ಯಕೀಯ ಸಿಬ್ಬಂದಿಗೂ ಕೊರೊನಾ ಕಾಡುತ್ತಿದೆ. ಆ ರಾಷ್ಟ್ರದ ಆರೂವರೆ ಸಾವಿರ ವೈದ್ಯಕೀಯ ಸಿಬ್ಬಂದಿಗೆ ಕೊರೊನಾ ಸೋಂಕಿರುವುದು ದೃಢಪಟ್ಟಿದೆ ಎಂದು ತಿಳಿದುಬಂದಿದೆ. ಒಟ್ಟು ಸೋಂಕಿತರಲ್ಲಿ ಶೇ 15ರಷ್ಟು ವೈದ್ಯಕೀಯ ಸಿಬ್ಬಂದಿಯಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಸರಿಯಾದ ಸುರಕ್ಷಾ ಸಾಧನಗಳಿಲ್ಲದೇ ಹಾಗೂ ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಚಿಕಿತ್ಸೆ ನೀಡುವ ಕಾರಣದಿಂದ ವೈದ್ಯರಿಗೂ ಕೂಡಾ ವೈರಸ್ ಹರಡಿದೆ ಎಂದು ಹೇಳಲಾಗುತ್ತಿದೆ.
ಸ್ಪೇನ್ನಲ್ಲಿ ವೈದ್ಯರಿಗೂ ಬಿಟ್ಟಿಲ್ಲ ಕೊರೊನಾ ಉಪಟಳ: 6,500 ವೈದ್ಯಕೀಯ ಸಿಬ್ಬಂದಿಗೆ ಸೋಂಕು - ವೈದ್ಯರಿಗೆ ಕೊರೊನಾ
ಕೆಲವು ರಾಷ್ಟ್ರಗಳಲ್ಲಿ ಕೊರೊನಾ ಹಾವಳಿಯಿಂದ ಪರಿಸ್ಥಿತಿ ಕೈ ಮೀರುತ್ತಿದೆ. ಚೀನಾ ನಂತರದಲ್ಲಿ ಇಟಲಿ ಹಾಗೂ ಸ್ಪೇನ್ಗಳಲ್ಲಿ ಕೊರೊನಾ ಗಂಭೀರ ಪರಿಣಾಮಗಳನ್ನು ಸೃಷ್ಟಿಮಾಡಿದೆ. ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳದ ಕಾರಣಕ್ಕೆ ಇಲ್ಲಿನ ಆರೂವರೆ ಸಾವಿರ ವೈದ್ಯಕೀಯ ಸಿಬ್ಬಂದಿಯಲ್ಲೂ ಕೊರೊನಾ ದೃಢಪಟ್ಟಿದೆ.
ಇಟಲಿಯ ನಂತರ ಸ್ಪೇನ್ ಜಗತ್ತಿನಲ್ಲಿ ಅತಿ ಹೆಚ್ಚು ಕೊರೊನಾ ಉಪಟಳಕ್ಕೆ ಒಳಗಾದ ರಾಷ್ಟ್ರ. ಮಾರ್ಚ್ 14ರಿಂದ ಈ ರಾಷ್ಟ್ರದಲ್ಲಿ ಲಾಕ್ಡೌನ್ ಹೇರಲಾಗಿದೆ. ಆದರೂ ಕೊರೊನಾ ಸೋಂಕನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವಲ್ಲಿ ಅಲ್ಲಿನ ಸರ್ಕಾರ ವಿಫಲವಾಗಿದೆ. ಸ್ಪೇನ್ನ 49, 515 ಮಂದಿ ಸೋಂಕಿತರಾಗಿದ್ದು ಈವರೆಗೆ 3,647 ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಜನಸಂಖ್ಯೆಯ ಮೂರನೇ ಒಂದು ಭಾಗದಷ್ಟು ಜನರಿರುವ ಸ್ಪೇನ್ ರಾಜಧಾನಿ ಮ್ಯಾಡ್ರಿಡ್ನಲ್ಲಿ 12 ಸಾವಿರಕ್ಕೂ ಹೆಚ್ಚು ಮಂದಿ ಸೋಂಕಿತರಾಗಿದ್ದು 1,500ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ.
ಈಗ 6 ಸಾವಿರಕ್ಕೂ ಹೆಚ್ಚು ವೈದ್ಯ ಸಿಬ್ಬಂದಿಯಲ್ಲಿ ಕೊರೊನಾ ಕಾಣಿಸಿಕೊಂಡಿದ್ದು, ಚಿಕಿತ್ಸೆ ನೀಡಲು ವೈದ್ಯರೇ ಭಯಪಡುವ ಸ್ಥಿತಿ ನಿರ್ಮಾಣವಾಗಿದೆ. ಹೋಟೆಲ್ಗಳನ್ನು ಐಸೋಲೇಷನ್ ಕೊಠಡಿಗಳನ್ನಾಗಿ ಹಾಗೂ ಆಸ್ಪತ್ರೆಗಳಾಗಿ ಪರಿವರ್ತನೆ ಮಾಡಲಾಗಿದೆ.