ನವದೆಹಲಿ:ದೇಶದಲ್ಲಿ ಹೇರಿಕೆ ಮಾಡಿರುವ ಲಾಕ್ಡೌನ್ 3.0 ಮೇ. 17ಕ್ಕೆ ಮುಕ್ತಾಯಗೊಳ್ಳಲಿದ್ದು, ಅದು ಕೊನೆಗೊಳ್ಳಲು ಕೇವಲ ಆರು ದಿನ ಮಾತ್ರ ಬಾಕಿ ಉಳಿದಿರುವ ಕಾರಣ ಪ್ರಧಾನಿ ಮೋದಿ ಇಂದು ಎಲ್ಲ ರಾಜ್ಯದ ಸಿಎಂಗಳೊಂದಿಗೆ ಮಹತ್ವದ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚೆ ನಡೆಸುತ್ತಿದ್ದಾರೆ.
ದೇಶದಲ್ಲಿ ಕಳೆದ ಒಂದೂವರೆ ತಿಂಗಳಿಂದ ಲಾಕ್ಡೌನ್ ಹೇರಿಕೆ ಮಾಡಿರುವ ಕಾರಣ ವಿವಿಧ ರಾಜ್ಯಗಳಲ್ಲಿನ ಆರ್ಥಿಕ ಸ್ಥಿತಿ ಹಾಗೂ ಲಾಕ್ಡೌನ್ ಯಾವ ರೀತಿಯಾಗಿ ಸಡಿಲಿಕೆ ಮಾಡಬಹುದು ಎಂಬುದರ ಕುರಿತು ಮಾಹಿತಿ ಪಡೆದುಕೊಳ್ಳಲಿದ್ದಾರೆ. ದೇಶದಲ್ಲಿನ ಆರ್ಥಿಕ ಚಟುವಟಿಕೆಗಳು ಸಂಪೂರ್ಣವಾಗಿ ಸ್ತಬ್ಧಗೊಂಡಿರುವ ಕಾರಣ ಅವುಗಳನ್ನ ಪುನಾಃರಂಭ ಮಾಡುವ ಸಲುವಾಗಿ ಮೋದಿ ಎಲ್ಲ ರಾಜ್ಯದ ಸಿಎಂಗಳಿಂದ ಮಹತ್ವದ ಮಾಹಿತಿ ಪಡೆಕೊಳ್ಳುತ್ತಿದ್ದಾರೆ.
ಈಗಾಗಲೇ ರೆಡ್, ಗ್ರೀನ್ ಹಾಗೂ ಆರೆಂಜ್ ಝೋನ್ಗಳಾಗಿ ವಿವಿಧ ಜಿಲ್ಲೆಗಳನ್ನ ವಿಂಗಡಣೆ ಮಾಡಲಾಗಿದ್ದು, ಮೇ. 17ರ ನಂತರ ಇದರಲ್ಲಿ ಮತ್ತಷ್ಟು ಬದಲಾವಣೆ ತಂದು ಜನರಿಗೆ ಲಾಕ್ಡೌನ್ ಸಡಿಲಿಕೆ ನೀಡುವ ಸಾಧ್ಯತೆ ಕುರಿತು ನಮೋ ಚರ್ಚೆ ನಡೆಸುವ ಸಾಧ್ಯತೆ ಇದೆ.
ಇಂದು ಎಲ್ಲ ರಾಜ್ಯದ ಸಿಎಂಗಳೊಂದಿಗೆ ನಮೋ ಮಾತು... ಲಾಕ್ಡೌನ್ ಬಗ್ಗೆ ಮಹತ್ವದ ನಿರ್ಧಾರ!?
ಮೋದಿ ತಮ್ಮ ಸಲಹೆ - ಸೂಚನೆ ನೀಡುವುದಕ್ಕೂ ಮುಂಚಿತವಾಗಿ ಎಲ್ಲ ರಾಜ್ಯದ ಮುಖ್ಯಮಂತ್ರಿಗಳಿಂದ ರಾಜ್ಯದಲ್ಲಿನ ಸ್ಥಿತಿ ಗತಿ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ದಟ್ಟವಾಗಿದ್ದು, ಮೇ.17ರ ಬಳಿಕ ಯಾವೆಲ್ಲ ಸಡಿಲಿಕೆ ನೀಡಬಹುದು ಎಂಬುದರ ಕುರಿತು ಮಾಹಿತಿ ಕಲೆ ಹಾಕುವ ಸಾಧ್ಯತೆ ಇದೆ.
ಅತಿ ಹೆಚ್ಚು ಕೊರೊನಾ ಪ್ರಕರಣ ಕಂಡು ಬಂದಿರುವ ಕಂಟೇನ್ಮೆಂಟ್ ಪ್ರದೇಶಗಳಲ್ಲಿ ಲಾಕ್ಡೌನ್ ಮುಂದೂಡಿಕೆ ಮಾಡಿ ಉಳಿದ ಪ್ರದೇಶಗಳಲ್ಲಿ ಆರ್ಥಿಕ ಚಟುವಟಿಕೆ ನಡೆಸಲು ಅನುಮತಿ ನೀಡುವ ಸಾಧ್ಯತೆ ಕೂಡ ದಟ್ಟವಾಗಿದೆ. ಇನ್ನು ತೆಲಂಗಾಣದಲ್ಲಿ ಈಗಾಗಲೇ ಮೇ. 29ರವರೆಗೆ ಲಾಕ್ಡೌನ್ ಮುಂದೂಡಿಕೆಯಾಗಿದ್ದು, ಆರ್ಥಿಕ ಪುನಶ್ಚೇತನಕ್ಕೆ ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ಮಾಹಿತಿ ಪಡೆದುಕೊಳ್ಳುವ ಸಾಧ್ಯತೆ ಇದೆ.
ಈಗಾಗಲೇ ಮಹಾರಾಷ್ಟ್ರ, ತಮಿಳುನಾಡು, ಗುಜರಾತ್, ನವದೆಹಲಿ, ಉತ್ತರಪ್ರದೇಶದಲ್ಲಿ ಅತಿ ಹೆಚ್ಚು ಕೋವಿಡ್ ಪ್ರಕರಣ ಕಂಡು ಬರುತ್ತಿರುವ ಕಾರಣ ಅದರ ವಿರುದ್ಧದ ಹೋರಾಟ ಮತ್ತಷ್ಟು ಗಟ್ಟಿಗೊಳಿಸುವಂತೆ ಮಾಹಿತಿ ನೀಡಬಹುದಾಗಿದೆ.