ನವದೆಹಲಿ:ನಿನ್ನೆ ಲೋಕಸಭೆಯಲ್ಲಿ ಪೌರತ್ವ ತಿದ್ದುಪಡಿ ಮಸೂದೆ ಅಂಗೀಕಾರಗೊಂಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಪೌರತ್ವ ತಿದ್ದುಪಡಿ ಮಸೂದೆಯು ಭಾರತದ ಶತಮಾನಗಳಷ್ಟು ಹಳೆಯದಾದ ನೀತಿ ಮತ್ತು ಮಾನವೀಯ ಮೌಲ್ಯಗಳ ನಂಬಿಕೆಗೆ ಅನುಗುಣವಾಗಿದೆ ಎಂದಿದ್ದಾರೆ.
ಮಸೂದೆ ಅಂಗೀಕಾರಕ್ಕೆ ಸಂತಸ ವ್ಯಕ್ತಪಡಿಸಿದ ಮೋದಿ, ದೀರ್ಘ ಹಾಗೂ ಆರೋಗ್ಯಕರ ಚರ್ಚೆಯ ಬಳಿಕ ಪೌರತ್ವ ತಿದ್ದುಪಡಿ ಮಸೂದೆ ಲೋಕಸಭೆಯಲ್ಲಿ ಅಂಗೀಕಾರಗೊಂಡಿದೆ. ಈ ಮಸೂದೆಯನ್ನು ಬೆಂಬಲಿಸಿದ ಸಂಸದರು ಹಾಗೂ ವಿವಿಧ ಪಕ್ಷಗಳಿಗೆ ನಾನು ಧನ್ಯವಾದ ಸಲ್ಲಿಸುತ್ತೇನೆ ಎಂದು ಮೋದಿ ಟ್ವಿಟ್ಟರ್ನಲ್ಲಿ ಹೇಳಿಕೊಂಡಿದ್ದಾರೆ.
ಇದೇ ವೇಳೆ, ಲೋಕಸಭೆಯಲ್ಲಿ ಮಸೂದೆಯನ್ನು ಸ್ಪಷ್ಟವಾಗಿ ವಿವರಿಸಿದ ಗೃಹ ಸಚಿವ ಅಮಿತ್ ಶಾರನ್ನು ಶ್ಲಾಘಿಸಿದ ಮೋದಿ, ಲೋಕಸಭಾ ಸದಸ್ಯರು ಎತ್ತಿದ ಹಲವು ಪ್ರಶ್ನೆಗಳಿಗೆ ಶಾ ವಿಸ್ತ್ರತ ಉತ್ತರ ನೀಡಿದ್ದಾರೆ ಎಂದು ಬೆನ್ನು ತಟ್ಟಿದ್ದಾರೆ.
ಪ್ರತಿಪಕ್ಷಗಳ ತೀವ್ರ ವಿರೋಧದ ನಡುವೆಯೂ ಪೌರತ್ವ ತಿದ್ದುಪಡಿ ಮಸೂದೆ ಕೆಳಮನೆಯಲ್ಲಿ ಅಂಗೀಕಾರಗೊಂಡಿದ್ದು, ಮಸೂದೆ ಪರವಾಗಿ 311 ಸದಸ್ಯರು ಮತ ಹಾಕಿದರೆ, 80 ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ಒಟ್ಟು ಲೋಕಸಭೆಯಲ್ಲಿ 391 ಸದಸ್ಯರು ಹಾಜರಿದ್ದರು. ವಿಶೇಷವೆಂದರೆ ಈ ಮಸೂದೆ ಬಗ್ಗೆ ಲೋಕಸಭೆಯಲ್ಲಿ ಸುಮಾರು 7 ಗಂಟೆಗಳ ಕಾಲ ಚರ್ಚೆ ನಡೆದಿದೆ.
ಏನಿದು ಪೌರತ್ವ ತಿದ್ದುಪಡಿ ಮಸೂದೆ ?
ಆರು ದಶಕಗಳಷ್ಟು ಹಳೆಯದಾದ ಪೌರತ್ವ ಕಾಯ್ದೆಗೆ ತಿದ್ದುಪಡಿಗಳನ್ನು ತರಲು ಉದ್ದೇಶಿಸಿರುವ ಈ ಮಸೂದೆ ಪ್ರಕಾರ, ಕಿರುಕುಳದಿಂದಾಗಿ ಅಫ್ಘಾನಿಸ್ತಾನ, ಬಾಂಗ್ಲಾದೇಶ ಹಾಗೂ ಪಾಕಿಸ್ತಾನಗಳಿಂದ 2014 ರೊಳಗಾಗಿ ಬಂದಿರುವ ಹಿಂದೂ, ಸಿಖ್, ಬೌದ್ಧ, ಜೈನ ಮತ್ತು ಕ್ರಿಶ್ಚಿಯನ್ ಸಮುದಾಯಗಳಿಗೆ ಸೇರಿದ ನಿರಾಶ್ರಿತರನ್ನು ಅಕ್ರಮ ವಲಸಿಗರು ಎಂದು ಪರಿಗಣಿಸಲಾಗುವುದಿಲ್ಲ. ಅಲ್ಲದೆ ದೇಶದಲ್ಲಿ ಐದು ವರ್ಷಗಳ ಕಾಲ ವಾಸವಾದ ಬಳಿಕ ಅವರಿಗೆ ಭಾರತೀಯ ಪೌರತ್ವ ನೀಡಲಾಗುತ್ತದೆ.