ನವದೆಹಲಿ:ಭಾರತದ ರಾಷ್ಟ್ರೀಯ ಭದ್ರತಾ ಸಲಹಗಾರ ಅಜಿತ್ ದೋವಲ್ ಹಾಗೂ ಫ್ರಾನ್ಸ್ನ ರಜತಾಂತ್ರಿಕ ಸಲಹೆಗಾರ ಎಮ್ಯಾನುಯೆಲ್ ಬೊನ್ನೆ ನಡುವೆ ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಎನ್‌ಎಸ್‌ಎ ಮಟ್ಟದ ಸಭೆ ನಡೆಯುತ್ತಿದೆ.
ಇನ್ನೂ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಫ್ರಾನ್ಸ್ ಉತ್ಸುಕವಾಗಿದೆ ಎಂಬ ವರದಿಗಳ ಮಧ್ಯೆ, ಉಭಯ ದೇಶಗಳ ನಡುವೆ ಇಂದು ಇದೇ ಮೊದಲ ಬಾರಿಗೆ ಉನ್ನತ ಮಟ್ಟದ ಮಾತುಕತೆ ನಡೆಯಲಿದೆ. ಸಭೆಯಲ್ಲಿ ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಅವರ ರಾಜತಾಂತ್ರಿಕ ಹಾಗೂ ಭದ್ರತಾ ಸಲಹೆಗಾರ ಬೊನ್ನೆ ಭಾಗವಹಿಸಿದ್ದಾರೆ.
ಕೆಲ ದಿನಗಳ ಹಿಂದೆಯಷ್ಟೇ ಭಾರತದ ಪ್ರಧಾನಿ ನರೇಂದ್ರ ಮೋದಿ ಹಾಗೂ ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರೋನ್ ಪ್ಯಾರಿಸ್‌ನಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದರು. ನಂತರ ಜಿ 7 ಶೃಂಗಸಭೆಯಲ್ಲಿ ಉಭಯ ನಾಯಕರು ಮತ್ತೆ ಭೇಟಿಯಾಗಿದ್ದರು. ಇದೇ ವೇಳೆ, ಸೆಪ್ಟೆಂಬರ್ ತಿಂಗಳಲ್ಲಿ ಮೊದಲ ರಫೇಲ್ ಯುದ್ಧ ವಿಮಾನದ ಹಸ್ತಾಂತರವಾಗಲಿದೆ ಎಂದು ಉಭಯ ನಾಯಕರು ಖಚಿತಪಡಿಸಿದ್ದರು.
ಸೆಪ್ಟೆಂಬರ್ ತಿಂಗಳ ದ್ವಿತಿಯಾರ್ಧದಲ್ಲಿ ಭಾರತದ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಫ್ರಾನ್ಸ್ಗೆ ಭೇಟಿ ನೀಡುವ ಸಾಧ್ಯತೆ ಇದ್ದು, ಈ ವೇಳೆ ಮೊದಲ 36 ರಫೇಲ್ ಯುದ್ಧ ವಿಮಾನಗಳನ್ನು ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ. ಇನ್ನೊಂದೆಡೆ ಭಾರತಕ್ಕೆ ಈ ವಿಮಾನಗಳನ್ನು ಕಳುಹಿಸುವ ಮುನ್ನವೇ ಭಾರತದ ಫೈಲಟ್ಗಳಿಗೆ ಫ್ರಾನ್ಸ್ ನೆಲದಲ್ಲೇ ಉನ್ನತ ಮಟ್ಟದ ತರಬೇತಿಯನ್ನೂ ನೀಡಲಾಗುತ್ತದೆ.
ಲಭ್ಯವಿರುವ ಮಾಹಿತಿ ಪ್ರಕಾರ, ಇಂದು ನಡೆಯುತ್ತಿರುವ ಸಭೆಯಲ್ಲಿ ಮುಂದಿನ ಯುದ್ಧ ವಿಮಾನದ ಬೇಡಿಕೆ ಹಾಗೂ ಇತರ ರಕ್ಷಣಾ ಸಾಮಾಗ್ರಿಗಳ ಖರೀದಿ ಕುರಿತಾಗಿ ನಡೆಯಲಿದೆ. ಭಾರತೀಯ ನೌಕಾಪಡೆಗೆ ಹೆಲಿಕಾಪ್ಟರ್‌ಗಳು ಹಾಗೂ ಇತರ ರಕ್ಷಣಾ ಸಾಧನಗಳನ್ನು ಹೊರತುಪಡಿಸಿ, ಮತ್ತೆ 36 ರಫೇಲ್ ಯುದ್ಧವಿಮಾನಗಳನ್ನು ಭಾರತಕ್ಕೆ ಮಾರಾಟ ಮಾಡಲು ಫ್ರಾನ್ಸ್ ಬಯಸಿದೆ ಎಂದು ಹೇಳಲಾಗಿದೆ.