ನವದೆಹಲಿ:ಕೊರೊನಾ ವೈರಸ್ನಿಂದ ತತ್ತರಿಸಿದ ಚೀನಾಗೆ ಬೇಕಾದ ವೈದ್ಯಕೀಯ ಸಾಮಗ್ರಿ, ಉಪಕರಣಗಳನ್ನು ವಿದೇಶಾಂಗ ಸಚಿವಾಲಯದ ಸಹಾಯದಿಂದ ಕಳುಹಿಸಿಕೊಡುತ್ತಿದ್ದೇವೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಹೇಳಿದರು.
ಅಪಾಯಕಾರಿ ವೈರಸ್ನಿಂದಾಗಿ ಜಗತ್ತೇ ಬೆಚ್ಚಿ ಬಿದ್ದಿದೆ. ಚೀನಾದ ವುಹಾನ್ನಲ್ಲಿ ಆರಂಭವಾಗಿ ಇಡೀ ವಿಶ್ವವನ್ನೇ ಆವರಿಸಿಕೊಂಡಿದೆ. ಇದರಿಂದಾಗಿ ಎಷ್ಟೋ ಅಮಾಯಕ ಜೀವಗಳು ಬಲಿಯಾಗುತ್ತಿವೆ ಎಂದು ವಿಷಾದ ವ್ಯಕ್ತಪಡಿಸಿದರು.
ಭಾರತದಲ್ಲೂ ಕೊರೊನಾ ವೈರಸ್ನ ಮೂರು ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಕುರಿತು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಅದನ್ನು ನಿಯಂತ್ರಿಸಲು ಭಾರತದಲ್ಲಿ ಎಲ್ಲಾ ರೀತಿಯ ಕ್ರಮ ಕೈಗೊಳ್ಳಲಾಗುತ್ತಿದೆ. ಯಾರೂ ಆತಂಕಪಡಬೇಡಿ ಎಂದು ಧೈರ್ಯ ತುಂಬಿದರು.
ಈ ಮಹಾಮಾರಿಯಿಂದ ಚೀನಾದ ಅರ್ಥವ್ಯವಸ್ಥೆಯೂ ಕೂಡಾ ಅಧೋಗತಿಯತ್ತ ತಲುಪುತ್ತಿದೆ. ಅದನ್ನು ನಿಯಂತ್ರಿಸಲು ಚೀನಾ ಇನ್ನಿಲ್ಲದ ಪ್ರಯತ್ನಗಳನ್ನೂ ಮಾಡುತ್ತಿದೆ. ಚೀನಾದಂತಹ ಪ್ರಕರಣಗಳು ಇಲ್ಲಿ ಕಂಡು ಬಂದಿಲ್ಲ. ಒಂದು ವೇಳೆ ಕಾಣಿಸಿಕೊಂಡಲ್ಲಿ ಸಚಿವಾಲಯವು ಅಗತ್ಯ ಔಷಧಿಗಳನ್ನು ವಿತರಿಸಲಿದೆ ಎಂದರು.
ಕೆಲ ದಿನಗಳ ಹಿಂದೆ ಪ್ರಧಾನಿ ಮೋದಿ ಕೂಡ ಎಲ್ಲಾ ರೀತಿಯ ಸಹಾಯ ನೀಡುವುದಾಗಿ ಚೀನಾ ಅಧ್ಯಕ್ಷರಿಗೆ ಪತ್ರದ ಮೂಲಕ ತಿಳಿಸಿದ್ದರು.
ಈಗಾಗಲೇ ಪ್ರಪಂಚಾದಾದ್ಯಂತ ಕೊರೊನಾ ವೈರಸ್ ಸೊಂಕಿನಿಂದಾಗಿ 1,369 ಜೀವಗಳು ಪ್ರಾಣ ಕಳೆದುಕೊಂಡಿವೆ. ಚೀನಾ ಹೊರತುಪಡಿಸಿ ಬೇರೆ ದೇಶದಲ್ಲಿ ಒಬ್ಬರು ಮಾತ್ರ ಸಾವಿಗೀಡಾಗಿದ್ದಾರೆ. ಅಲ್ಲದೆ, 60,349 ಮಂದಿಗೆ ಸೊಂಕು ತಗುಲಿರುವುದು ದೃಢಪಟ್ಟಿದೆ. 6212 ಮಂದಿ ಗುಣಮುಖರಾಗಿದ್ದಾರೆ ಎಂದು ತಿಳಿದು ಬಂದಿದೆ.