ಹೈದರಾಬಾದ್: ಪ್ರತಿವರ್ಷ ಮೇ 11ರಂದು ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತದೆ. 1998 ಮೇ 11ರಂದು ಪೋಖರಣ್ನಲ್ಲಿ ಸರಣಿ ಅಣುಬಾಂಬ್ ಸ್ಫೋಟದ ಯಶಸ್ವಿ ಪರೀಕ್ಷೆ, ಬೆಂಗಳೂರಿನಲ್ಲಿ ಸ್ವದೇಶಿ ನಿರ್ಮಿತ 'ಹನ್ಸಾ-3' ಹೆಲಿಕಾಪ್ಟರ್ನ ಯಶಸ್ವಿ ಹಾರಾಟ ಹಾಗೂ ಸ್ವದೇಶಿ ನಿರ್ಮಿತ ತ್ರಿಶೂಲ್ ಕ್ಷಿಪಣಿ ಯಶಸ್ವಿ ಉಡಾವಣೆ ನಡೆದ ಪರಿಣಾಮವಾಗಿ ರಾಷ್ಟ್ರೀಯ ತಂತ್ರಜ್ಞಾನ ದಿನವಾಗಿ ಆಚರಿಸಲಾಗುತ್ತಿದೆ.
ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮೇ 11 ರಾಷ್ಟ್ರೀಯ ತಂತ್ರಜ್ಞಾನ ದಿನ ಘೋಷಣೆ ಮಾಡಿದ್ದು, ತಂತ್ರಜ್ಞಾನ ಕ್ಷೇತ್ರದಲ್ಲಿ ನಮ್ಮ ವಿಜ್ಞಾನಿಗಳು, ಎಂಜಿನಿಯರ್ಗಳ ಅದ್ಭುತ ಸಾಧನೆ ಹಾಗೂ ಅಮೂಲ್ಯ ಕೊಡುಗೆ ಎತ್ತಿ ತೋರಿಸಲು ಈ ದಿನ ಆಚರಣೆ ಮಾಡಲಾಗುತ್ತದೆ. ಜತೆಗೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದತ್ತ ಯುವಕರನ್ನ ಪ್ರೋತ್ಸಾಹಿಸುವುದು ಇದರ ಮುಖ್ಯ ಉದ್ದೇಶವಾಗಿದೆ.
ಭಾರತ ಈಗಾಗಲೇ ತಂತ್ರಜ್ಞಾನದಲ್ಲಿ ಅಣ್ವಸ್ತ್ರ ಪರೀಕ್ಷೆ, ಕ್ಷಿಪಣಿ ಉಡಾವಣೆ, ವಿಮಾನಗಳ ನಿರ್ಮಾಣ , ಕೃಷಿ, ನೀರಾವರಿ ಸೇರಿದಂತೆ ಅಪರಿಮಿತ ಸಾಧನೆ ಮಾಡಿದೆ. ಸಾರ್ವಜನಿಕ ಆರೋಗ್ಯ ಕ್ಷೇತ್ರದಲ್ಲಿ ಅಧುನಿಕ ತಂತ್ರಜ್ಞಾನ ಮತ್ತು ವಿಧಾನಗಳ ಬಳಕೆಯಿಂದಾಗಿ ಭಾರತ ಹಲವಾರು ಸಾಧನೆ ಮಾಡಿದೆ. ಕುಷ್ಟರೋಗ, ಸಿಡುಬು, ಪೋಲಿಯೋಗಳ ನಿವಾರಣೆಯಲ್ಲೂ ಮಲೇರಿಯಾ, ಕಾಲಾ ಅಜರ್, ಕಾಲರಾ ಮತ್ತು ಟಿ.ಬಿ.ಗಳ ನಿಯಂತ್ರಣದಲ್ಲೂ ನಮ್ಮ ದೇಶ ಯಶಸ್ವಿಯಾಗಿದೆ.
COVID-19ನಲ್ಲಿ ಡಿಜಿಟಲ್ ತಂತ್ರಜ್ಞಾನ
ಕೊರೊನಾ ವೈರಸ್ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ತಂತ್ರಜ್ಞಾನ ಕಂಪನಿಗಳಿಂದ ವಿಶ್ವ ಆರೋಗ್ಯ ಸಂಸ್ಥೆಗೆ ಹೆಚ್ಚಿನ ಬೆಂಬಲ ದೊರತಿದೆ. ವಿಶ್ವದ ಪ್ರಮುಖ 30 ಡಿಜಿಟಲ್ ತಂತ್ರಜ್ಞಾನ ತಜ್ಞರು ಒಟ್ಟುಗೂಡಿ ಮಹಾಮಾರಿ ವಿರುದ್ಧ ಹೋರಾಡಲು ನಿರ್ಧರಿಸಿದ್ದಾರೆ.
ಈಗಾಗಲೇ ಕೋವಿಡ್-19 ವಿರುದ್ಧ ತಂತ್ರಜ್ಞಾನ ಬಳಿಕೆ ಮಾಡಿಕೊಂಡು ಹೋರಾಟ ನಡೆಸಲಾಗಿದ್ದು, ಸೋಂಕು ತಪಾಸಣೆ, ಪತ್ತೆಹಚ್ಚುವಲ್ಲಿ ಯಶಸ್ವಿಯಾಗಿದೆ. ಇದಕ್ಕೆ ಸಂಬಂಧಿಸಿದಂತೆ ಸ್ಟೀವ್ ಡೇವಿಸ್ ಹಾಗೂ ಮಾಲೆಬೊನ್ ಮ್ಯಾಟ್ಸೊಸೊ ಸಹ ಮಾಹಿತಿ ನೀಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ಮಹಾನಿರ್ದೇಶಕ ಡಾ. ಟೆಡ್ರೊಸ್ ಅಧಾನಮ್ ಸಾಂಕ್ರಾಮಿಕ ರೋಗ ಹತ್ತಿಕ್ಕುವಲ್ಲಿ ತಂತ್ರಜ್ಞಾನದ ಪಾತ್ರ ಬಹುಮುಖ್ಯ ಎಂದಿದ್ದಾರೆ. ಕೋವಿಡ್-19 ಗಾಗಿ ಡಿಜಿಟಲ್ ಹೆಲ್ತ್ ಹಾಗೂ ಇನ್ನೋವೇಶನ್ ಪ್ರಯತ್ನ ಪರಿಚಯಿಸಿ ತಂತ್ರಜ್ಞಾನ ಬಳಕೆ ಮಾಡಿಕೊಳ್ಳುವುದು ಮುಖ್ಯ ಎಂದು ತಿಳಿಸಿದ್ದಾರೆ.