ನವದೆಹಲಿ :ಕೊರೊನಾ ಲಾಕ್ಡೌನ್ನಿಂದಾಗಿ ಸುಮಾರು 40 ದಿನಗಳ ಕಾಲ ಬಂದ್ ಆಗಿದ್ದ ದೇಶದ ಅತಿದೊಡ್ಡ ಕಾರು ತಯಾರಕ ಮಾರುತಿ ಸುಜುಕಿ ಇಂಡಿಯಾ (MSI) ಹರಿಯಾಣದ ತನ್ನ ಮನೇಸರ್ ಸ್ಥಾವರದಲ್ಲಿ ಮತ್ತೆ ಕಾರ್ಯಾಚರಣೆ ಆರಂಭಿಸಿದೆ.
ಲಾಕ್ಡೌನ್ನಿಂದಾಗಿ ಕಳೆದ ಮಾರ್ಚ್ 22ರಿಂದ ಮನೇಸರ್ ಮತ್ತು ಗುರ್ಗಾಂವ್ನಲ್ಲಿ ಕಂಪನಿಯು ಉತ್ಪಾದನಾ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿತ್ತು. "ಮನೇಸರ್ ಸ್ಥಾವರದಲ್ಲಿ ಉತ್ಪಾದನೆ ಪ್ರಾರಂಭವಾಗಿದೆ. ಮೊದಲ ಕಾರು ಇಂದು (ಮಂಗಳವಾರ) ಹೊರ ಬರಲಿದೆ" ಎಂದು ಕಂಪನಿ ಅಧ್ಯಕ್ಷ ಆರ್ ಸಿ ಭಾರ್ಗವ ತಿಳಿಸಿದ್ದಾರೆ.
ಕಂಪನಿಯು ಏಕ ಶಿಫ್ಟ್(single shift) ಆಧಾರದ ಮೇಲೆ ಕಾರ್ಯಾಚರಣೆಯನ್ನು ಪ್ರಾರಂಭಿಸಿದೆ. ಪ್ರಸ್ತುತ ಶೇ. 75ರಷ್ಟು ಉದ್ಯೋಗಿಗಳಿಗೆ ಮಾತ್ರ ಅವಕಾಶವಿದೆ. ಎರಡು ಪಾಳಿಗಳಲ್ಲಿ ಉದ್ಯೋಗಿಗಳಿಗೆ ಕೆಲಸ ನಿರ್ವಹಿಸಲು ಅನುಮತಿ ಸೇರಿದಂತೆ ಸರ್ಕಾರಿ ನಿಯಮಗಳನ್ನು ಅವಲಂಬಿಸಿ ಪೂರ್ಣ ಪ್ರಮಾಣದ ಉತ್ಪಾದನೆ ಬಗ್ಗೆ ನಿರ್ಧರಿಸಲಾಗುತ್ತದೆ ಎಂದು ಭಾರ್ಗವ ತಿಳಿಸಿದರು.
ಕಂಪನಿಯ ಇನ್ನೊಂದು ಉತ್ಪಾದನಾ ಸ್ಥಾವರವಾದ ಗುರ್ಗಾಂವ್ನಲ್ಲಿ ಉತ್ಪಾದನಾ ಚಟುವಟಿಕೆಗಳನ್ನು ಪುನರಾರಂಭಿಸುತ್ತೇವೆ. ಆದರೆ, ಸದ್ಯಕ್ಕಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.