ನವದೆಹಲಿ: ಮಹಾರಾಷ್ಟ್ರ ರಾಜಕೀಯ ಕ್ಷಿಪ್ರ ಸಂಚಲನ ನೀಡಿದ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಯನ್ನು ಪ್ರಶ್ನಿಸಿ ಶಿವಸೇನೆ-ಎನ್ಸಿಪಿ-ಕಾಂಗ್ರೆಸ್ ಸಲ್ಲಿಸಿರುವ ರಿಟ್ ಅರ್ಜಿಯ ತೀರ್ಪು ಇಂದು ಪ್ರಕಟವಾಗಲಿದೆ.
ಭಾನುವಾರ ಸಲ್ಲಿಕೆಯಾದ ರಿಟ್ ಅರ್ಜಿ ಸತತ ಎರಡು ದಿನಗಳ ವಿಚಾರಣೆ ನಡೆದಿದೆ. ಸೋಮವಾರ ವಾದ - ಪ್ರತಿವಾದ ಕೊನೆಗೊಂಡಿದ್ದು, ಜಸ್ಟೀಸ್ ಎನ್.ವಿ ರಮಣ್ ನೇತೃತ್ವದ ಪೀಠ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇದಕ್ಕೆ ಸಂಬಂಧಿಸಿದ ಮಹತ್ವದ ತೀರ್ಪು ಇಂದು 10.30ಕ್ಕೆ ಪ್ರಕಟವಾಗಲಿದೆ.
ಮಹಾರಾಷ್ಟ್ರ ಸರ್ಕಾರ ರಚನೆ ಬಿಕ್ಕಟ್ಟು... ನಾಳೆಗೆ ತೀರ್ಪು ಕಾಯ್ದಿರಿಸಿದ ಸುಪ್ರೀಂಕೋರ್ಟ್
ಮಹಾರಾಷ್ಟ್ರ ವಿಧಾನಸಭೆ ಚುನಾವಣೆ ಫಲಿತಾಂಶ ಹೊರಬಿದ್ದ ಬಳಿಕ ಸಾಕಷ್ಟು ಹೈಡ್ರಾಮಾಗಳು ನಡೆದು ಕೊನೆಗೆ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿತ್ತು. ಇದರ ನಡುವೆ ಶಿವಸೇನೆ-ಎನ್ಸಿಪಿ ಹಾಗೂ ಕಾಂಗ್ರೆಸ್ ಒಟ್ಟಾಗಿ ಸರ್ಕಾರ ರಚನೆಗೆ ಬಹುತೇಕ ಎಲ್ಲವನ್ನೂ ಅಂತಿಮಗೊಳಿಸಿದ್ದವು. ಆದರೆ, ಕಳೆದ ಶುಕ್ರವಾರದಿಂದ ಶನಿವಾರ ಮುಂಜಾನೆ ನಡುವೆ ನಡೆದ ದಿಢೀರ್ ಬೆಳವಣಿಗೆಯಲ್ಲಿ ದೇವೇಂದ್ರ ಫಡ್ನವೀಸ್ ಮತ್ತೆ ಸಿಎಂ ಪಟ್ಟ ಅಲಂಕರಿಸಿದ್ದರು. ಎನ್ಸಿಪಿ ನಾಯಕ ಅಜಿತ್ ಪವಾರ್ ಬೆಂಬಲ ಬಲದಲ್ಲಿ ಸರ್ಕಾರ ಅಸ್ತಿತ್ವಕ್ಕೆ ಬಂದಿತ್ತು.
ತೀರ್ಪಿನ ಮಹತ್ವ ಏನು..?
ಮಹಾರಾಷ್ಟ್ರ ರಾಜ್ಯರಾಜಕಾರಣದ ಈ ಕ್ಷಿಪ್ರ ಸಂಚಲನ ಭಾರಿ ಸುದ್ದಿ ಮಾಡಿತ್ತು. ನಸುಕಿನ ಜಾವ ರಾಷ್ಟ್ರಪತಿ ಆಳ್ವಿಕೆ ಹಿಂಪಡೆದು ಸರ್ಕಾರ ರಚನೆಗೆ ಅನುವು ಮಾಡಿಕೊಟ್ಟ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ನಡೆಗೆ ವಿಪಕ್ಷಗಳು ಕೆಂಡಾಮಂಡಲರಾಗಿದ್ದಾರೆ.
ತಕ್ಷಣವೇ ಬಹುಮತ ಸಾಬೀತುಪಡಿಸಬೇಕು ಎಂದು ಪಟ್ಟುಹಿಡಿದಿರುವ ಮೂರೂ ಪಕ್ಷಗಳು ತಮ್ಮ ಪರ ವಕೀಲರ ಮೂಲಕ ಕೋರ್ಟ್ನಲ್ಲಿ ಇದನ್ನೇ ಹೇಳಿಸಿದ್ದಾರೆ. ಸೋಮವಾರದ ವಿಚಾರಣೆಯಲ್ಲಿ ಹಾಲಿ ಸರ್ಕಾರಕ್ಕೆ ನ.30ರವರೆಗೆ ಬಹುಮತ ಸಾಬೀತಿಗೆ ಅವಕಾಶವಿದೆ ಇದೆ ಎಂದು ಮಹಾರಾಷ್ಟ್ರ ಬಿಜೆಪಿ ಪರ ವಾದ ಮಂಡಿಸಿದ್ದ ಮುಕುಲ್ ರೋಹ್ಟಗಿ ಹೇಳಿದ್ದರು. ಆದರೆ ಕಾಂಗ್ರೆಸ್-ಎನ್ಸಿಪಿ ಪರ ವಕೀಲ ಅಭಿಷೇಕ್ ಮನುಸಿಂಘ್ವಿ ಶೀಘ್ರ ಬಹುಮತ ಸಾಬೀತಿಗೆ ಒತ್ತಾಯಿಸಿದ್ದರು. ಸದ್ಯ ಎಲ್ಲ ವಾದ-ಪ್ರತಿವಾದವನ್ನು ಆಲಿಸಿರುವ ಜಸ್ಟೀಸ್ ಎನ್.ವಿ.ರಮಣ, ಅಶೋಕ್ ಭೂಷಣ್ ಹಾಗೂ ಸಂಜೀವ್ ಖನ್ನಾ ಪೀಠ ಇಂದು ಮಹಾರಾಷ್ಟ್ರ ಸರ್ಕಾರದ ಭವಿಷ್ಯ ನಿರ್ಧರಿಸುವ ತೀರ್ಪು ಪ್ರಕಟಿಸಲಿದೆ.