ಬಿನಾ (ಮಧ್ಯಪ್ರದೇಶ): ಇಲ್ಲಿನ ಸಾಗರ್ ಜಿಲ್ಲೆಯ 117 ವರ್ಷದ ವೃದ್ಧೆ ಆದಾಯ ತೆರಿಗೆ ಇಲಾಖೆಗೆ ತೆರಿಗೆ ಪಾವತಿಸುವ ದೇಶದ ಅತ್ಯಂತ ಹಿರಿಯರು ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ.
ಸಾಗರ್‌ನ ಬಿನಾ ನಿವಾಸಿ ಗಿರಿಜಾ ತಿವಾರಿ ತೆರಿಗೆ ಕಟ್ಟುತ್ತಿರುವ ವೃದ್ಧೆ. ಗಿರಿಜಾ ಅವರ ಪ್ಯಾನ್ ಕಾರ್ಡ್‌ನಲ್ಲಿ ಹುಟ್ಟಿದ ದಿನಾಂಕವನ್ನು ಏಪ್ರಿಲ್ 15, 1903 ಎಂದು ಬರೆಯಲಾಗಿದೆ. ಸ್ವಾತಂತ್ರ್ಯ ಹೋರಾಟಗಾರ ದಿ.ಸಿದ್ಧಾಂತ್ ತಿವಾರಿ ಅವರ ಪತ್ನಿ ಈ ಗಿರಿಜಾ.
ಆದಾಯ ತೆರಿಗೆ ಅಧಿಕಾರಿಗಳು ಅವರ ಹೆಸರನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್'ನಲ್ಲಿನೋಂದಾಯಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಈ ಕುರಿತು ಮಾಹಿತಿ ನೀಡಿದ ಕುಟುಂಬ ಸದಸ್ಯರು, ರಾಜ್ಯ ಸರ್ಕಾರದಿಂದ ಪಿಂಚಣಿಯನ್ನು ಪಡೆಯುತ್ತಿದ್ದಾರೆ ಎಂದು ತಿಳಿಸಿದರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಗಿರಿಜಾ ಅವರ ಮರಿ ಮೊಮ್ಮಗಳು ಅಂಜಲಿ ತಿವಾರಿ, ‘ನನ್ನ ಮುತ್ತಜ್ಜಿ ಹಲವು ದಶಕಗಳಿಂದ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ. ಒಂದು ಬಾರಿಯೂ ಅದನ್ನು ತಪ್ಪಿಸಿಲ್ಲ ಎಂದು ಸಂತಸ ವ್ಯಕ್ತಪಡಿಸಿದರು.
ತೆರಿಗೆಗಳನ್ನು ಪ್ರಾಮಾಣಿಕ ಮತ್ತು ನಿಯಮಿತವಾಗಿ ಪಾವತಿಸಬೇಕು ಎಂಬುದಕ್ಕೆ ಅವರು ನಮಗೆ ಉತ್ತಮ ಉದಾಹರಣೆಯಾಗಿದ್ದಾರೆ. ತೆರಿಗೆ ಪಾವತಿಸುವುದನ್ನು ತಪ್ಪಿಸುವ ಜನರಿದ್ದಾರೆ. ಅವರು ನನ್ನ ಮುತ್ತಜ್ಜಿಯಿಂದ ಸ್ಫೂರ್ತಿ ಪಡೆಯಬೇಕು ಎಂದು ಸಲಹೆ ನೀಡಿದರು.
ಆದಾಯ ತೆರಿಗೆ ಇಲಾಖೆ 160ನೇ ಐಟಿ ದಿನದಲ್ಲಿ ಸೋಮವಾರ ತೆರಿಗೆ ಪಾವತಿದಾರರನ್ನು ಗುರುತಿಸುವ ಸಂದರ್ಭದಲ್ಲಿ ಗಿರಿಜಾ ತಿವಾರಿ ಪ್ರಸ್ತುತ ದೇಶದ ಅತ್ಯಂತ ಹಳೆಯ ತೆರಿಗೆದಾರರು ಎಂದು ತಿಳಿದು ಬಂದಿದೆ. ಅಲ್ಲದೆ, ಅವರನ್ನು ಇಲಾಖೆ ಗೌರವಿಸಿದೆ. ಜೊತೆಗೆ, ಮಧ್ಯಪ್ರದೇಶ ಮತ್ತು ಚತ್ತೀಸ್‌ಗಢದಲ್ಲಿ 100 ವರ್ಷ ದಾಟಿದ ನಾಲ್ವರು ತೆರಿಗೆ ಪಾವತಿದಾರರನ್ನೂ ಅವರ ನಿವಾಸಗಳಲ್ಲಿ ಸನ್ಮಾನಿಸಿದೆ.