ನವದೆಹಲಿ :ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು ಶುಕ್ರವಾರ ಲೋಕಸಭೆಯಲ್ಲಿ ಕಾಂಗ್ರೆಸ್ನವರು ಕೇವಲ ಗಾಂಧಿ ಪರಿವಾರದ ಲಾಭಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದ ಮೇಲೆ ಕಾಂಗ್ರೆಸ್ಸಿಗರಿಂದ ತೀವ್ರ ವಿರೋಧ ಎದುರಿಸಿದ್ದರು. ಬಳಿಕ ತಮ್ಮ ಹೇಳಿಕೆಯ ಬಗ್ಗೆ ವಿಷಾದ ವ್ಯಕ್ತಪಡಿಸಿದರು.
ಸಚಿವ ಅನುರಾಗ್ ಠಾಕೂರ್ ಅವರು ತಮ್ಮ ಹೇಳಿಕೆಯ ಬಗ್ಗೆ ಕ್ಷಮೆಯಾಚಿಸಬೇಕೆಂದು ಪ್ರತಿಪಕ್ಷಗಳು ಬೇಡಿಕೆಯ ಇರಿಸಿದರು. ಇದಕ್ಕೆ ತಲೆಬಾಗಿದ ಕೇಂದ್ರ ಸಚಿವ, ಆ ಹೇಳಿಕೆಯ ಹಿಂದೆ ಯಾರೊಬ್ಬರ ಮನೋಭಾವವನ್ನು ನೋಯಿಸುವ ಉದ್ದೇಶ ನನಗಿರಲಿಲ್ಲ. ಯಾರಿಗಾದರೂ ನೋವಾಗಿದ್ದರೆ (ನನ್ನ ಟೀಕೆಗಳಿಂದ) ನನಗೂ ನೋವುಂಟಾಗಿದೆ ಎಂದರು.
ಪಿಎಂ ಕೇರ್ಸ್ ಬೆಂಬಲಿಸಿ ಮಾತನಾಡುತ್ತಿದ್ದ ಠಾಕೂರ್, ಸುಪ್ರೀಂಕೋರ್ಟ್‌ನಿಂದ ಹಿಡಿದು ಸಮಸ್ತ ದೇಶ ಪಿಎಂ ಕೇರ್ಸ್ ಪರವಾಗಿದೆ. ಆದರೆ, ಕಾಂಗ್ರೆಸ್ ಮಾತ್ರ ಈ ಕುರಿತು ಕ್ಷುಲ್ಲಕ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿದರು. ಮುಂದುವರಿದು, ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ 1948ರಲ್ಲಿ ಪ್ರಧಾನಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿ ಸ್ಥಾಪಿಸಿದ್ದರು. ಆದರೆ, ಈವರೆಗೂ ಅದರ ನೋಂದಣಿಯಾಗಿಲ್ಲ. ಕಾಂಗ್ರೆಸ್ನವರು ಕೇವಲ ಗಾಂಧಿ ಕುಟುಂಬಸ್ಥರ ಲಾಭಕ್ಕಾಗಿ ಕೆಲಸ ಮಾಡುತ್ತಾರೆ ಎಂದು ಆರೋಪಿಸಿದರು.