ತಮಿಳುನಾಡು: ಏಕಾಂತದಲ್ಲಿದ್ದುದನ್ನು ನೋಡಿದ್ದಕ್ಕೆ 8 ವರ್ಷದ ಬಾಲಕನನ್ನು ಪ್ರೇಮಿಗಳಿಬ್ಬರು ಹತ್ಯೆ ಮಾಡಿರುವ ಘಟನೆ ತಮಿಳುನಾಡಿನಲ್ಲಿ ನಡೆದಿದೆ.
3ನೇ ತರಗತಿ ವಿದ್ಯಾರ್ಥಿ ಪವನೇಶ್ (8) ಕೊಲೆಯಾದ ಬಾಲಕ. ನಿನ್ನೆ ತಿರುಪುರ ಜಿಲ್ಲೆಯ ಸಮೀಪ ಒಥುಕುಲಿಯ ಪಲ್ಲಗೌಂಡೆನ್ಪಾಲಯಂ ಕೊಳದಲ್ಲಿ ಈತ ಶವವಾಗಿ ಪತ್ತೆಯಾಗಿದ್ದ.
8 ವರ್ಷದ ಬಾಲಕನನ್ನು ಪ್ರೇಮಿಗಳು ಕೊಂದು ನೀರಿಗೆಸೆದ ಘಟನೆ ತಮಿಳುನಾಡಿನಲ್ಲಿ ನಡೆದಿದೆ. ಗುರುವಾರ ಸಂಜೆ ಬಾಲಕ ಪವನೇಶ್ ಮನೆಗೆ ಹಿಂತಿರುಗದ ಕಾರಣ ಆತಂಕಗೊಂಡ ಪೋಷಕರು ಆತನಿಗಾಗಿ ಎಲ್ಲೆಡೆ ಹುಡುಕಾಟ ನಡೆಸಿದ್ದರು. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇದೇ ವೇಳೆ ದಾರಿಹೋಕರೊಬ್ಬರು ಕೊಳದಲ್ಲಿ ಬಾಲಕನ ಶವ ತೇಲುತ್ತಿದ್ದುದನ್ನು ಕಂಡು ಪೊಲೀಸರಿಗೆ ಸುದ್ದಿ ಮುಟ್ಟಿಸಿದ್ದಾರೆ. ಸ್ಥಳಕ್ಕೆ ಆಗಮಿಸಿದ್ದ ಪೊಲೀಸರು ಪರಿಶೀಲನೆ ನಡೆಸಿದಾಗ, ಶವನ ಕುತ್ತಿಗೆಯ ಭಾಗದಲ್ಲಿ ಗಾಯದ ಗುರುತುಗಳಿದ್ದುದು ಪತ್ತೆಯಾಗಿದೆ. ಶವವನ್ನು ಪಾಲಕರಿಗೆ ಒಪ್ಪಿಸಲಾಗಿದ್ದು, ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.
ಬಾಲಕನ್ನು ಕೊಂದ ಆರೋಪಿ ಅಜಿತ್ ಈ ಪ್ರಕರಣ ಸಂಬಂಧ ಅಜಿತ್ (21) ಎಂಬಾತನನ್ನು ಬಂಧಿಸಲಾಗಿದೆ. ಆರೋಪಿ ಅಜಿತ್ ಹಾಗೂ ಈತನ 17 ವರ್ಷದ ಪ್ರೇಯಸಿ ಇಬ್ಬರೂ ಸೇರಿ ಪವನೇಶ್ ನನ್ನು ಕೊಲೆ ಮಾಡಿದ್ದಾಗಿ ಒಪ್ಪಿಕೊಂಡಿದ್ದಾರೆ. ಇಬ್ಬರೂ ಪುತೂರ್ನ ಪಲ್ಲಾಪಲಯನ್ ಕೊಳದ ಬಳಿ ಏಕಾಂತದಲ್ಲಿದ್ದುದನ್ನು ಪವನೇಶ್ ನೋಡಿದ್ದಾನೆ. ಬಾಲಕನಿಗೆ ತಮ್ಮ ಪ್ರಣಯದ ವಿಷಯ ಗೊತ್ತಾಗಿದ್ದರಿಂದ ಆತನನ್ನು ಕೊಲೆ ಮಾಡಿ ಶವವನ್ನು ಪಲ್ಲಗೌಂಡೆನ್ಪಾಲಯಂ ಕೊಳದಲ್ಲಿ ಹಾಕಿದ್ದಾಗಿ ಆರೋಪಿಗಳು ಒಪ್ಪಿಕೊಂಡಿದ್ದಾರೆ.