ಕರ್ನಾಟಕ

karnataka

ETV Bharat / bharat

ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆಗೆ ಲೋಕಸಭೆಯಲ್ಲಿ ಅಂಗೀಕಾರ: ಕೃಷಿ ವಲಯದಲ್ಲಿ ಮತ್ತಷ್ಟು ನಿರೀಕ್ಷೆ

ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ-2020 ಲೋಕಸಭೆಯಲ್ಲಿ ಅಂಗೀಕಾರಗೊಂಡಿದ್ದು, ಕೃಷಿ ವಲಯದಲ್ಲಿ ಮತ್ತಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿದೆ.

Essential Commodities Act
ಅಗತ್ಯ ಸರಕುಗಳ ತಿದ್ದುಪಡಿ ಕಾಯ್ದೆ

By

Published : Sep 16, 2020, 8:34 AM IST

ನವದೆಹಲಿ: ಕೃಷಿ, ಆಹಾರ ಪದಾರ್ಥಗಳ ಸರಬರಾಜನ್ನು ನಿಯಂತ್ರಿಸುವ ಸಲುವಾಗಿ ಲೋಕಸಭೆಯಲ್ಲಿ ಅಗತ್ಯ ಸರಕುಗಳ (ತಿದ್ದುಪಡಿ)-2020ರ ಕಾಯ್ದೆಯನ್ನು ಅಂಗೀಕರಿಸಲಾಗಿದೆ.

ಈ ಕಾಯ್ದೆಯ ಮೂಲಕ ಯುದ್ಧ, ಬರಗಾಲ ಮುಂತಾದ ಸಂದರ್ಭಗಳಲ್ಲಿ ಕೆಲವು ಆಹಾರ ಪದಾರ್ಥಗಳ ಪೂರೈಕೆಯನ್ನು ಕೇಂದ್ರ ಸರ್ಕಾರ ನಿಯಂತ್ರಿಸಲು ಅವಕಾಶವಿದೆ.

ಬೆಲೆ ಏರಿಕೆ ಕಡ್ಡಾಯವಾಗಿದ್ದಲ್ಲಿ ಮಾತ್ರ ಕೃಷಿ ಉತ್ಪನ್ನಗಳ ಮೇಲೆ ಮಿತಿ ಹೇರಬಹುದು ಎಂಬ ಸುಗ್ರೀವಾಜ್ಞೆಯನ್ನು ಬದಲಾಯಿಸುವ ಸಲುವಾಗಿ ಈ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಈ ಸುಗ್ರೀವಾಜ್ಞೆಯನ್ನು ಕೃಷಿ ವ್ಯಾಪಾರೋದ್ಯಮದಲ್ಲಿನ ಸುಧಾರಣೆಗಳ ಭಾಗವಾಗಿ ಹೊರಡಿಸಲಾಗಿತ್ತು.

ಲೋಕಸಭೆಯಲ್ಲಿ ಚರ್ಚೆ ವೇಳೆ ಉತ್ತರಿಸಿದ ಕೇಂದ್ರ ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣಾ ಖಾತೆಯ ರಾಜ್ಯ ಸಚಿವ ರಾವ್ ಸಾಹೇಬ್ ಧನ್ವೆ, ಅನಿವಾರ್ಯ ಸಂದರ್ಭಗಳಲ್ಲಿ ಈ ಕಾಯ್ದೆ ಬಳಸಿಕೊಳ್ಳಲಾಗುತ್ತದೆ. ಆದರೂ ಕೆಲವು ಷರತ್ತುಗಳು ಹಾಗೂ ವಿನಾಯಿತಿಗಳನ್ನು ನೀಡಲಾಗಿದೆ. 1955ರ ಅಗತ್ಯ ಸರಕುಗಳ ಕಾಯ್ದೆಗೆ ಈಗ ತಿದ್ದುಪಡಿ ತರಲಾಗಿದೆ ಎಂದು ಸ್ಪಷ್ಟೀಕರಿಸಿದ್ದಾರೆ.

ದೇಶಕ್ಕೆ ಸ್ವಾತಂತ್ರ್ಯ ಬಂದಾಗಿನಿಂದ ಅಕ್ಕಿ ಮತ್ತು ಗೋಧಿಯ ಉತ್ಪಾದನೆಯಲ್ಲಿ ಹೆಚ್ಚಳ ಕಂಡು ಬಂದಿದೆ. ಅಗತ್ಯ ಸರಕುಗಳ ಕಾಯ್ದೆಗೆ ಈಗ ತಿದ್ದುಪಡಿ ತಂದಿರುವುದು ಖಂಡಿತವಾಗಿಯೂ ಆಹಾರ ಉತ್ಪನ್ನಗಳ ಪೂರೈಕೆಯಲ್ಲಿ ಆಗುತ್ತಿದ್ದ ಸಮಸ್ಯೆಯನ್ನು ತಪ್ಪಿಸಿ, ಬೃಹತ್ ಬಂಡವಾಳ ಹೂಡಿಕೆಗೆ ಸಹಕಾರ ನೀಡುತ್ತದೆ. ತರಕಾರಿ ಹಾಗೂ ಹಣ್ಣುಗಳ ಉತ್ಪಾದನೆಯಲ್ಲೂ ಇದೇ ಸಾಕಷ್ಟು ಸತ್ಪರಿಣಾಮ ಬೀರುತ್ತದೆ ಎಂದು ಸಚಿವರು ವಿಶ್ವಾಶ ವ್ಯಕ್ತಪಡಿಸಿದರು.

ಪ್ರಸ್ತುತವಾಗಿ ಕೃಷಿಯಲ್ಲಿ ಹೂಡಿಕೆಯನ್ನು ಹೆಚ್ಚಿಸಲು ಈ ಮಸೂದೆ ಪ್ರಮುಖ ಪಾತ್ರ ವಹಿಸುತ್ತದೆ. ಕೊರೊನಾ ಬಿಕ್ಕಟ್ಟಿನಿಂದಾಗಿ, ಆಹಾರ ಉತ್ಪನ್ನಗಳ ಸಾಗಣೆಗೂ ತೊಂದರೆಯಾಗಿತ್ತು. ಇದರಿಂದ ಕೆಲವೆಡೆ ಆಹಾರ ಉತ್ಪನ್ನಗಳ ಬೆಲೆ ಏರಿಕೆಯೂ ಆಗುವ ಸಾಧ್ಯತೆಯಿದ್ದು, ಕೇಂದ್ರ ಸರ್ಕಾರ ಅದನ್ನು ತಡೆದಿದೆ ಎಂದು ಸರ್ಕಾರದ ನಡೆಯನ್ನು ಶ್ಲಾಘಿಸಿದರು.

ಭಾರತವು ಕೃಷಿ ಉತ್ಪನ್ನಗಳನ್ನು ಅತಿ ಹೆಚ್ಚು ಉತ್ಪಾದನೆ ಮಾಡುತ್ತಿದೆ. ಆದರೆ ಉಗ್ರಾಣಗಳು, ಶೈತ್ಯಾಗಾರಗಳು, ಸಂಸ್ಕರಣಾ ಘಟಕಗಳ ಕೊರತೆಯಿಂದ ರೈತರು ನಷ್ಟ ಅನುಭವಿಸುತ್ತಿದ್ದಾರೆ. ಇದಕ್ಕೆ ಕಾರಣ 1955ರ ಕಾಯ್ದೆಯಲ್ಲಿದ್ದ ನ್ಯೂನತೆಗಳು ಎಂದು ಧನ್ವೆ ಅಭಿಪ್ರಾಯಪಟ್ಟಿದ್ದಾರೆ.

ABOUT THE AUTHOR

...view details