ನವದೆಹಲಿ: ಕೊರೊನಾ ಸಾಂಕ್ರಾಮಿಕ ರೋಗದ ದಾಳಿಯಿಂದಾಗಿ ಇಡೀ ಜಗತ್ತು ದಿನೇದಿನೇ ನುಜ್ಜುಗುಜ್ಜಾಗುತ್ತಿದೆ. ದೇಶದಲ್ಲಿ ಕೊರೊನಾ ದಾಳಿಗೆ ಬಲಿಯಾಗುವವರ ಸಂಖ್ಯೆಯನ್ನು ಸಾಧ್ಯವಾದಷ್ಟೂ ತಗ್ಗಿಸಬೇಕೆಂಬ ಉದ್ದೇಶದಿಂದ ಲಾಕ್ಡೌನ್ ಘೋಷಿಸಲಾಗಿದೆ. ಪರಿಣಾಮವಾಗಿ ಹಲವಾರು ರಂಗಗಳ ಕಾರ್ಯಚಟುವಟಿಕೆ ಸ್ಥಗಿತಗೊಂಡಿದೆ. ಈ ಸ್ಥಗಿತತೆಯೇನೂ ಹೀಗೇ ಇರುವುದಿಲ್ಲ; ಬಿಕ್ಕಟ್ಟು ಕೊನೆಗೊಂಡ ನಂತರದಲ್ಲಿ ಪರಿಸ್ಥಿತಿ ಸುಧಾರಿಸುತ್ತದೆ.
ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ತಮ್ಮ ಕ್ಯಾಬಿನೆಟ್ ಸಹೋದ್ಯೋಗಿಗಳೊಂದಿಗೆ ಸಭೆ ನಡೆಸಿ ದೇಶದ ಉತ್ಪಾದನಾ ವಲಯ ಮತ್ತು ರಫ್ತು ಉದ್ಯಮಗಳಿಗೆ ಮರುಜೀವ ನೀಡುವುದು ಹೇಗೆ ಎಂಬ ಕುರಿತು ಚರ್ಚೆ ನಡೆಸಿದರು. ಹೆಚ್ಚೆಚ್ಚು ಬಿಡಿಭಾಗಗಳನ್ನು ಮತ್ತು ಉತ್ಪನ್ನಗಳನ್ನು ದೇಶದಲ್ಲಿ ತಯಾರಿಸಲು ಹಲವಾರು ಸರ್ಕಾರಿ ಇಲಾಖೆಗಳು ತೀವ್ರ ಪ್ರಯತ್ನ ಹಾಕುತ್ತಿವೆ. ಔಷಧ, ಜವಳಿ, ಎಲೆಕ್ಟ್ರಾನಿಕ್ಸ್, ಆಹಾರ ಸಂಸ್ಕರಣೆ ಮತ್ತು ರಕ್ಷಣಾ ಉಪಕರಣಗಳ ತಯಾರಿಕಾ ಉದ್ಯಮಗಳು ಸಧ್ಯ ಸ್ಥಗಿತಗೊಂಡಿರುವ ದೇಶದ ಆರ್ಥಿಕ ಬೆಳವಣಿಗೆಗೆ ಹೊಸ ಚೈತನ್ಯ ನೀಡುವ ಸಾಮರ್ಥ್ಯ ಹೊಂದಿವೆ ಎಂದು ಭಾವಿಸಲಾಗಿದೆ.
ಮುಂದಿನ ಐದು ವರ್ಷಗಳಲ್ಲಿ 35,000 ಕೋಟಿ ರೂಪಾಯಿ ಮೌಲ್ಯದ ಶಸ್ತ್ರಾಸ್ತ್ರಗಳನ್ನು ರಫ್ತು ಮಾಡುವ ಗುರಿಯನ್ನು ಪ್ರಧಾನಮಂತ್ರಿ ನಿಗದಿಪಡಿಸಿದ್ದಾರೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ ‘ಮೇಕ್ ಇನ್ ಇಂಡಿಯಾ’ ಗುರಿಗೆ ಇದು ಹೊಸ ಜೀವ ನೀಡಲಿದೆ. ಐದೂವರೆ ವರ್ಷಗಳ ಹಿಂದೆ ‘ಮೇಕ್ ಇನ್ ಇಂಡಿಯಾ’ ಆರಂಭಗೊಂಡಾಗ ಸರ್ಕಾರವು ಒಂದು ಗುರಿಯನ್ನು ಘೋಷಿಸಿತ್ತು. 2022ರ ಹೊತ್ತಿಗೆ ಉತ್ಪಾದನಾ ವಲಯವನ್ನು ಜಿ.ಡಿ.ಪಿ.ಯ ಶೇಕಡಾ 22ರ ಮಟ್ಟಕ್ಕೆ ವಿಸ್ತರಿಸುವುದು ಆ ಮಹತ್ವಕಾಂಕ್ಷೆಯ ಗುರಿಯಾಗಿತ್ತು. ಇದರ ಜೊತೆಗೆ ಒಂದು ಕೋಟಿ ಉದ್ಯೋಗ ಸೃಷ್ಟಿಸುವುದು ಸಹ ಘೋಷಿತ ಗುರಿಯಾಗಿತ್ತು. ಆದರೆ ಇದಾದ ಸ್ವಲ್ಪ ಹೊತ್ತಿನಲ್ಲೇ ಉತ್ಸಾಹವೆಲ್ಲಾ ಇಳಿದು ಹೋಯಿತು.
ಇತ್ತೀಚಿನ ಆರ್ಥಿಕ ಸಮೀಕ್ಷೆ ತಿಳಿಯಪಡಿಸಿರುವ ಪ್ರಕಾರ ಮುಂದಿನ ಐದು ವರ್ಷಗಳಲ್ಲಿ 5 ಕೋಟಿ ಉದ್ಯೋಗ ಸೃಷ್ಟಿಸುವ ಬೇರೆಯದೇ ಆದ ‘ಸ್ಟಾರ್ಟಪ್ ಇಂಡಿಯಾ’ ಯೋಜನೆಗೆ ಚಾಲನೆ ನೀಡಲಾಗಿದೆ. ಹೆಸರು ಯಾವುದೇ ಇರಲಿ, ದೇಶದ ದುಡಿಯುವ ಕೈಗಳಿಗೆ ದೇಶದಲ್ಲೇ ದುಡಿಯಲು ಸಾಕಷ್ಟು ಕೆಲಸ ಮತ್ತು ಅವಕಾಶ ಸೃಷ್ಟಿಸುವುದು ಈ ಹೊತ್ತಿನ ಅಗತ್ಯವಾಗಿದೆ. ಲಾಕ್ ಡೌನ್‍ನಿಂದಾಗಿ ಕಾರ್ಪೆಟ್ ತಯಾರಿಕೆ, ನೆಲಹಾಸು ತಯಾರಿಕೆ ಮತ್ತು ಗಾರ್ಮೆಂಟುಗಳ ಉತ್ಪಾದನೆ ಸ್ಥಗಿತಗೊಂಡಿರುವಾಗ ಜವಳಿ ಉದ್ಯಮವು ಮುಖಗವಸು ಉತ್ಪಾದನೆಗೆ ಮುಂದೆ ಬಂದಿದೆ. ಅನೇಕ ರಾಜ್ಯಗಳಲ್ಲಿ ಈ ಸಲದ ಸುಗ್ಗಿ ಸಮಯದಲ್ಲಿ ಗನ್ನಿಬ್ಯಾಗ್ ಮತ್ತು ಟಾರ್ಪಾಲಿನ್‍ಗಳಿಗೆ ಬಹಳ ಕೊರತೆಯಾಗಿದೆ. ಇವುಗಳನ್ನು ತಯಾರಿಸಲು ಸ್ಥಳೀಯ ಅಗತ್ಯದ ಆಧಾರದಲ್ಲಿ ಸಣ್ಣ ಮಟ್ಟದ ಉದ್ಯಮಗಳನ್ನು ಆರಂಭಿಸಬಹುದು.
ವೈಯಕ್ತಿಕ ಸುರಕ್ಷಾ ಸಾಧನಗಳಾದ ಕೈಗವಸುಗಳನ್ನು ಕ್ಷಿಪ್ರವಾಗಿ ತಯಾರಿಸಬಹುದು. ಅಸಂಘಟಿತ ವಲಯದ ಸುಮಾರು 40 ದಶಲಕ್ಷ ಕಾರ್ಮಿಕರ ಬದುಕು ಅನಿಶ್ಚಿತತೆಯಲ್ಲಿರುವಾಗ ಅವರಿಗೆ ಸೂಕ್ತ ಕೆಲಸ ನೀಡಲು ಯೋಜನೆಗಳನ್ನು ರೂಪಿಸುವುದು ಅತ್ಯಗತ್ಯ. ಶೇಕಡಾ 67ರಷ್ಟು ಬೃಹತ್ ಪ್ರಮಾಣದ ಔಷಧಗಳನ್ನು ಆಮದು ಮಾಡಿಕೊಳ್ಳುವ ಮತ್ತು ಚೀನಾದಿಂದ ಕಚ್ಚಾ ಫಾರ್ಮಾಸ್ಯುಟಿಕಲ್ಸ್‍ಗಳನ್ನು ತರಿಸಿಕೊಂಡ ಇತ್ತೀಚಿನ ಬೆಳವಣಿಗೆಯಿಂದಾಗಿ ಭಾರತವು ಆಕ್ಟಿವ್ ಫಾರ್ಮಾ ಇನ್‍ಗ್ರಿಡಿಯೆಂಟ್( API)ಗಳಿಗೆ ಚೀನಾವನ್ನೇ ಅವಲಂಬಿಸುವ ಸ್ಥಿತಿಗೆ ತಳ್ಳಲ್ಪಟ್ಟಿದೆ. ವಾಸ್ತವದಲ್ಲಿ APIಗಳ ತಯಾರಿಕೆ ಭಾರತದ ಪಾರಂಪರಿಕ ಶಕ್ತಿಯಾಗಿತ್ತು.
25ವರ್ಷಗಳ ಹಿಂದಿನವರೆಗೂ ಮಾತ್ರೆ ಮತ್ತು ಕ್ಯಾಪ್ಸೂಲುಗಳನ್ನು ತಯಾರಿಸಲು ಬೇಕಾದ ಕಚ್ಚಾ ರಾಸಾಯನಿಕಗಳ ಉತ್ಪಾದನೆ ಮತ್ತು ಹಲವು ಹಂತಗಳ ಶುದ್ಧೀಕರಣವು ಭಾರತದಲ್ಲೇ ನಡೆಯುತ್ತಿತ್ತು. ಅದನ್ನು ಈಗ ಮತ್ತೆ ಪುನಶ್ಚೇತನಗೊಳಿಸಿಕೊಂಡರೆ APIಗಳ ರಫ್ತಿನಲ್ಲಿ ಭಾರತಕ್ಕೆ ಯಾವುದೇ ಪೈಪೋಟಿಯೇ ಇರುವುದಿಲ್ಲ. ಬೆತ್ತದ ಕುರ್ಚಿ, ಸೆಣಬಿನ ವಸ್ತುಗಳು, ಚರ್ಮದ ವಸ್ತುಗಳು ಮತ್ತು ಕರಕುಶಲ ವಸ್ತುಗಳಗಳನ್ನು ತಯಾರಿಸುವ ಸಣ್ಣ ಗಾತ್ರದ ಉದ್ಯಮಗಳಿಗೆ ಸರ್ಕಾರ ಸ್ವಲ್ಪ ಸಹಾಯ ಹಸ್ತ ಚಾಚಿದರೂ ಅದ್ಭುತಗಳನ್ನೇ ಸೃಷ್ಟಿಸಬಹುದಾಗಿದೆ. ಬಿಡಿಭಾಗಗಳನ್ನು ಮತ್ತು ಉಪಕರಣಗಳನ್ನು ನಿಯಂತ್ರಿಸುವ ಮೂಲಕ ಆಯುಧ ತಯಾರಿಕೆಯಂತಹ ಕ್ಷೇತ್ರಗಳನ್ನು ಸ್ವಾವಲಂಬಿಯಾಗಿಸಬಹುದಾಗಿದೆ.
ಭಾರತದಂತಹ ಪ್ರಮುಖ ಕೃಷಿಪ್ರಧಾನ ದೇಶದಲ್ಲಿ ಆಹಾರ ಸಂಸ್ಕರಣೆ ತಂತ್ರಜ್ಞಾನವನ್ನು ಸುಧಾರಿಸುವುದು ಬಹಳ ಸುಲಭದ ಕೆಲಸ. ನಮ್ಮ ಅಗತ್ಯಗಳಿಗೆ ಬೇಕಿರುವುದನ್ನು ಮತ್ತು ಹೊರ ದೇಶಗಳಿಗೆ ರಫ್ತು ಮಾಡಲು ಬೇಕಿರುವುದನ್ನು ನಾವೇ ತಯಾರಿಸುವಂತಾದರೆ ಅದರಿಂದ ನಿರುದ್ಯೋಗವನ್ನು ನಿರ್ಮೂಲನೆಗೊಳಿಸಿ ಸ್ವಾವಲಂಬಿ ಭಾರತದ ನಿರ್ಮಾಣ ಸಾಧ್ಯವಾಗುತ್ತದೆ.