ನವದೆಹಲಿ:ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಹುಲ್ ಗಾಂಧಿ ಅವರು ರಾಜೀನಾಮೆ ನೀಡಿದ ನಂತರ ನಾಯಕತ್ವದ ಬಗೆಗಿನ ಸ್ಪಷ್ಟತೆಯ ಕೊರತೆ ಕಾಂಗ್ರೆಸ್ ಪಕ್ಷವನ್ನು ನೋಯಿಸುತ್ತಿದೆ ಎಂದು ಸಂಸದ ಶಶಿ ತರೂರ್ ಹೇಳಿದ್ದಾರೆ.
ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, ಪಕ್ಷದಲ್ಲಿನ ಸಿಡಬ್ಲ್ಯೂಸಿ ಸದಸ್ಯತ್ವ ಸೇರಿದಂತೆ ಎಲ್ಲ ಪ್ರಮುಖ ಹುದ್ದೆಗಳಿಗೆ ಹೊಸ ನಾಯಕರ ಆಯ್ಕೆ ಆಗಲಿ. ಮುಂಬರುವ ಚುನಾವಣೆಗಳಲ್ಲಿ ಗೆಲ್ಲಲು ಅದು ನೆರವಾಗಲಿದೆ. ಕಾಂಗ್ರೆಸ್ಸನ್ನು ಮುನ್ನಡೆಸಲು ಯುವ ನಾಯಕರು ಸೂಕ್ತ ಎಂಬ ಪಂಜಾಬ್ ಸಿಎಂ ಅಮರಿಂದರ್ ಸಿಂಗ್ ಹೇಳಿಕೆಗೆ ತರೂರ್ ಕೂಡ ಬೆಂಬಲ ಸೂಚಿಸಿದರು.
ಪಕ್ಷದ ಮುಖ್ಯಸ್ಥರ ಹುದ್ದೆಯ ಚುನಾವಣೆಗೆ ಕರೆ ನೀಡಿದಾಗ ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಅಖಾಡಕ್ಕೆ ಇಳಿಯಲಿ ಎಂದು ಆಶಿಸುತ್ತೇನೆ. ಅವರು ಆ ಹುದ್ದೆಗೆ ಸ್ಪರ್ಧಿಸಲಿದ್ದಾರೆಯೇ ಎಂದು ನಿರ್ಧರಿಸುವ ಜವಾಬ್ದಾರಿ ಗಾಂಧಿ ಕುಟುಂಬಕ್ಕೆ ಬಿಟ್ಟದ್ದು ಎಂದರು.
ಕಾಂಗ್ರೆಸ್ನಲ್ಲಿ ನಾವು ಎದುರಿಸುತ್ತಿವ ಸಂಕಟಕ್ಕೆ ಸ್ಪಷ್ಟ ಉತ್ತರವಿಲ್ಲವೆಂದು ನಿರಾಶೆ ವ್ಯಕ್ತಪಡಿಸಿದರು. ಪಕ್ಷದ ಉನ್ನತ ಹಂತದಲ್ಲಿನವರ ಸ್ಪಷ್ಟತೆಯ ಕೊರತೆ ಕಾರ್ಯಕರ್ತರ ಹಾಗೂ ಅನುಯಾಯಿಗಳನ್ನು ನೋಯಿಸುವ ಸಾಧ್ಯತೆಯಿದೆ. ಪಕ್ಷದ ಪ್ರಮುಖ ನಿರ್ಧಾರ ಮತ್ತು ಜವಾಬ್ದಾರಿಯಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂಬುದು ಸತ್ಯ. ಎಲ್ಲರ ಶಕ್ತಿ ಒಟ್ಟಿಗೆ ಸೇರಿ ಪಕ್ಷವನ್ನು ಮುನ್ನಡಿಸಿಕೊಂಡು ಹೋಗಬೇಕಿದೆ ಎಂದು ತರೂರ್ ಹೇಳಿದರು.