ಹೈದರಾಬಾದ್:ಮನುಷ್ಯ ಪ್ರಾಚೀನ ಕಾಲದಿಂದಲೂ ಸಂಘಜೀವಿ. ಆತ ಯಾವತ್ತೂ ಸಮಾಜದಲ್ಲಿ ಬದುಕಿದವ. ಯಾವಾಗಲೂ ತನ್ನ ಸುತ್ತಲಿರುವವರೊಂದಿಗೆ ಮಾಹಿತಿ ಹಂಚಿಕೊಳ್ಳುತ್ತಲೇ ಬದುಕಿದವ. ಹಾಗಾಗಿಯೇ ಮಾನವ ದೂರದಲ್ಲಿರುವವರನ್ನು ಸಂಪರ್ಕಿಸಲು ಮೊದಲಿಗೆ ಪತ್ರ ಬರೆಯುತ್ತಿದ್ದ. ನಂತರ ಟೆಲಿಫೋನ್ ಕಂಡುಹಿಡಿದ. ಅದರ ನಂತರ ಕಳೆದ ಅರ್ಧ ಶತಮಾನದಲ್ಲಿ ಮಾಹಿತಿ ವಿನಿಮಯ ಕ್ಷೇತ್ರದಲ್ಲಿ ಕ್ರಾಂತಿಯೇ ನಡೆದಿದೆ. ಈಗ ಏನಿದ್ದರೂ ಮೊಬೈಲ್ ಹಾಗೂ ಸೋಷಿಯಲ್ ಮೀಡಿಯಾಗಳ ಕಾರುಬಾರು. ಜಗತ್ತಿನ ಒಂದು ಮೂಲೆಯಲ್ಲಿ ನಡೆದ ಘಟನೆ ಕ್ಷಣಾರ್ಧದಲ್ಲಿ ಇನ್ನೊಂದು ಮೂಲೆಗೆ ತಲುಪುತ್ತದೆ.
ಮಾಹಿತಿ ವಿನಿಮಯದಲ್ಲಿ ಸೋಷಿಯಲ್ ಮೀಡಿಯಾಗಳ ಪಾತ್ರ ಇಂದು ಅತ್ಯಂತ ಪ್ರಮುಖವಾಗಿದೆ. ಆದರೆ ಇಂದು ಸತ್ಯ ಮಾಹಿತಿಯೊಂದಿಗೆ ಸುಳ್ಳು ಮಾಹಿತಿಯೂ ಅದೇ ವೇಗದಲ್ಲಿ ಹರಡುತ್ತಿರುವುದು ಚಿಂತೆಗೆ ಕಾರಣವಾಗಿದೆ. ಅದರಲ್ಲೂ ಸೋಷಿಯಲ್ ಮೀಡಿಯಾಗಳ ಮೂಲಕ ಸುಳ್ಳು ಮಾಹಿತಿಯೊಂದು ಸತ್ಯವೆಂದೇ ಬಿಂಬಿತವಾಗಿ ಕೆಲ ಹೊತ್ತಾದರೂ ಹರಿದಾಡುತ್ತದೆ. ಹೀಗಾದಾಗ ನಡೆಯಬಾರದ್ದು ನಡೆದು ಹೋಗಿ ಬಿಡುತ್ತವೆ. ಅಂತಲೇ ಈಗ ಸೋಷಿಯಲ್ ಮೀಡಿಯಾಗಳು ತಮ್ಮ ಮಾಧ್ಯಮದ ಮೂಲಕ ಸುಳ್ಳು ಸುದ್ದಿಗಳು ಹರಡದಂತೆ ತಡೆಯಲು ಹಲವಾರು ಕ್ರಮ ಕೈಗೊಳ್ಳುತ್ತಿವೆ.
ಈಗ ಕೊರೊನಾ ವೈರಸ್ನ ಸಂಕಷ್ಟ ಕಾಲದಲ್ಲಿ ಕೊರೊನಾ ವೈರಸ್ ಕುರಿತಾಗಿ ಹರಡುತ್ತಿರುವ ತಪ್ಪು ಮಾಹಿತಿಗಳನ್ನು ತಡೆಯುವುದೇ ಸವಾಲಾಗಿದೆ. ನಿಖರ ಮಾಹಿತಿಗಿಂತ ವೈರಲ್ ಮಾಹಿತಿಯೇ ಮೇಲುಗೈ ಸಾಧಿಸುವುದರಿಂದ ಕೊರೊನಾ ಸೋಂಕು ನಿಗ್ರಹದಲ್ಲಿ ತಡೆಯುಂಟಾಗಬಹುದು ಎಂದು ವಿಶ್ವಸಂಸ್ಥೆ ಕೂಡ ಕಳವಳ ವ್ಯಕ್ತಪಡಿಸಿದೆ.
ಕೇಂಬ್ರಿಡ್ಜ್ ಅನಾಲಿಟಿಕ್ಸ್ ಹಗರಣದ ನಂತರ ಸಾಮಾಜಿಕ ಜಾಲತಾಣಗಳು ಕೋಟ್ಯಂತರ ಜನರ ವಿಶ್ವಾಸ ಕಳೆದುಕೊಂಡಿದ್ದು ಸತ್ಯ. ಈ ಹಗರಣದ ನಂತರ ಎಚ್ಚೆತ್ತ ಫೇಸ್ಬುಕ್ ಸುಳ್ಳು ಮಾಹಿತಿ ಪ್ರಸಾರ ತಡೆಗೆ ಹಲವಾರು ಕ್ರಮಗಳನ್ನು ಕೈಗೊಂಡಿತು. ಇದರ ಬೆನ್ನಲ್ಲೇ ಟ್ವಿಟರ್ ಹಾಗೂ ಯೂಟ್ಯೂಬ್ಗಳು ಸಹ ಕೆಲ ಕ್ರಮಗಳನ್ನು ಕೈಗೊಂಡವಾದರೂ ಇನ್ನೂ ಮಾಡಬೇಕಾದ್ದು ಬಹಳಷ್ಟಿದೆ.