ಕರ್ನಾಟಕ

karnataka

ಕಾಶ್ಮೀರ ಸಮಸ್ಯೆ ಕುರಿತು ಟ್ರಂಪ್​​​​​​ 'ಮಧ್ಯಸ್ಥಿಕೆ' ಹೇಳಿಕೆ ತಳ್ಳಿಹಾಕಿದ ಭಾರತ

By

Published : Jul 23, 2019, 3:03 AM IST

Updated : Jul 23, 2019, 1:38 PM IST

ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಬಳಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಹಾಯ ಕೇಳಿಲ್ಲ. ಕಾಶ್ಮೀರದ ವಿಚಾರದಲ್ಲಿ ಭಾರತದ ನಿರ್ಧಾರ ಎಂದಿಗೂ ಯಥಾಸ್ಥಿತಿಯಲ್ಲಿ ಇರಲಿದೆ ಎಂದು ವಿದೇಶಾಂಗ ವಕ್ತಾರ ರವೀಶ್​ ಕುಮಾರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ವಿದೇಶಾಂಗ ವಕ್ತಾರ ರವೀಶ್​ ಕುಮಾರ್

ನವದೆಹಲಿ: ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರದ ಸಮಸ್ಯೆಯನ್ನು ಬಗೆಹರಿಸುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್​ ಬಳಿ ಪ್ರಧಾನಿ ನರೇಂದ್ರ ಮೋದಿ ಯಾವುದೇ ಸಹಾಯ ಕೇಳಿಲ್ಲ ಎಂಬುದನ್ನು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ.

ಟ್ರಂಪ್​ ಅವರು ಕಾಶ್ಮೀರದ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ಧ ಎಂದಿದ್ದಾರೆ. ಆದರೆ ಪಿಎಂ ನರೇಂದ್ರ ಮೋದಿ ಈ ರೀತಿಯ ಯಾವುದೇ ಮನವಿ ಮಾಡಿಲ್ಲ. ಕಾಶ್ಮೀರದ ವಿಚಾರದಲ್ಲಿ ಭಾರತದ ನಿರ್ಧಾರ ಯಾವತ್ತೂ ಯಥಾವತ್ತಾಗಿ ಇರಲಿದೆ ಎಂದು ವಿದೇಶಾಂಗ ವಕ್ತಾರ ರವೀಶ್​ ಕುಮಾರ್​ ಟ್ವೀಟ್​ ಮೂಲಕ ಸ್ಪಷ್ಟಪಡಿಸಿದ್ದಾರೆ.

ಪಾಕಿಸ್ತಾನದ ಪಿಎಂ ಜೊತೆ ವಿಷಯ ಪ್ರಸ್ತಾಪಿಸಿದ ಟ್ರಂಪ್​​:

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್​ ಜೊತೆ ಸೋಮವಾರ ವೈಟ್ ​​ಹೌಸ್​​ನಲ್ಲಿ ನಡೆದ ಸಭೆ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಟ್ರಂಪ್​, ಭಾರತದ ಪ್ರಧಾನಿ ನರೇಂದ್ರ ಮೋದಿ ಕಾಶ್ಮೀರದ ವಿಚಾರದಲ್ಲಿ ನನ್ನ ಸಹಾಯ ಕೇಳಿದ್ದರು ಎಂದು ಹೇಳಿದ್ದಾರೆ. ಅಲ್ಲದೇ ಭಾರತ-ಪಾಕಿಸ್ತಾನ ನಡುವಿನ ಕಾಶ್ಮೀರದ ಸಮಸ್ಯೆಯಲ್ಲಿ 'ಮಧ್ಯವರ್ತಿ'ಯ ಪಾತ್ರವನ್ನು ನಿರ್ವಹಿಸಲು ನಾನು ಇಚ್ಛಿಸುತ್ತೇನೆ ಎಂಬ ವಿಚಾರವನ್ನು ಹೇಳಿದ್ದರು. ಆದರೆ ಹೀಗೆ ಹೇಳಿ ಸ್ವಲ್ಪ ಹೊತ್ತಲ್ಲೇ ಈ ಕುರಿತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜೊತೆ ಮಾತನಾಡುವುದಾಗಿ ಟ್ರಂಪ್​ ಹೇಳಿದ್ದಾರೆ ಎಂದು ವರದಿಯಾಗಿದೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್​ ಖಾನ್ ಹಾಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್​​ ಟ್ರಂಪ್

ಕಾಶ್ಮೀರದ ಬಗ್ಗೆ ಭಾರತದ ನಿರ್ಧಾರದಲ್ಲಿ ಯಥಾಸ್ಥಿತಿ:

ಈ ಬಗ್ಗೆ ಭಾರತೀಯ ನಾಯಕರು ಮನವಿ ಮಾಡಿದ್ದಾರೆ ಎಂಬ ಹೇಳಿಕೆಗೆ ಯಾವುದೇ ಆಧಾರಗಳಿಲ್ಲ. ಕಾಶ್ಮೀರದ ವಿಚಾರದಲ್ಲಿ ಭಾರತದ ನಿರ್ಧಾರ ಎಂದಿಗೂ ಯಥಾಸ್ಥಿತಿಯಲ್ಲಿ ಇರಲಿದೆ. ಇದರಲ್ಲಿ ಮೂರನೇ ವ್ಯಕ್ತಿ ಮೂಗು ತೂರಿಸುವ ಅವಶ್ಯಕತೆಯಿಲ್ಲ. ಸಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆ ಭಾರತ ಮತ್ತು ಪಾಕಿಸ್ತಾನದ ನಡುವಿನ ಎಲ್ಲಾ ಸಮಸ್ಯೆಗಳನ್ನು ದ್ವಿಪಕ್ಷೀಯವಾಗಿ ಪರಿಹರಿಸಲು ಆಧಾರವನ್ನು ಒದಗಿಸುತ್ತದೆ ಎಂದು ಭಾರತೀಯ ವಿದೇಶಾಂಗ ಸಚಿವಾಲಯ ಸ್ಪಷ್ಟಪಡಿಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಮೋದಿ ಮಾತ್ರ ಮೌನ: ಕಾಂಗ್ರೆಸ್​

ಇವರೆಲ್ಲರ ಹೇಳಿಕೆಯ ಬಳಿಕವೂ ಪಿಎಂ ಮೋದಿ ಮಾತ್ರ ಈ ವಿಚಾರವಾಗಿ ಯಾವುದೇ ಪ್ರತಿಕ್ರಿಯೆ ನೀಡದೆ ಮೌನವಾಗಿದ್ದಾರೆ ಎಂದು ಕಾಂಗ್ರೆಸ್​ನ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಆರೋಪಿಸಿದ್ದು, ವಿವಾದವನ್ನು ಸೃಷ್ಟಿಸಿರುವ ಈ ವಿಚಾರದ ಕುರಿತು ನರೇಂದ್ರ ಮೋದಿ ಮೌನ ಮುರಿದು ಸ್ಪಷ್ಟನೆ ನೀಡಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಇನ್ನು ಇದೇ ಸೆಪ್ಟೆಂಬರ್‌ನಲ್ಲಿ ಪ್ರಧಾನಿ ಮೋದಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಹಾಜರಾಗಲಿದ್ದು, ಈ ವಿಚಾರದ ಹೊರತಾಗಿ ಟ್ರಂಪ್‌ರೊಂದಿಗೆ ಸಭೆಯನ್ನೂ ನಡೆಸಲಿದ್ದಾರೆ ಎಂದು ತಿಳಿದು ಬಂದಿದೆ.

Last Updated : Jul 23, 2019, 1:38 PM IST

For All Latest Updates

TAGGED:

ABOUT THE AUTHOR

...view details