ಪಾಲಕ್ಕಾಡ್ (ಕೇರಳ):ಕೇರಳದಲ್ಲಿ ಗರ್ಭಿಣಿ ಆನೆಯ ಸಾವಿಗೆ ಕಾರಣನಾದ ಆರೋಪಿ, ಕಾಡು ಹಂದಿಗಳನ್ನು ಕೊಲ್ಲಲು ತೆಂಗಿನಕಾಯಿಯಲ್ಲಿ ಸ್ಫೋಟಕ ವಸ್ತುಗಳನ್ನು ತುಂಬಿಸಿದ್ದ ತನ್ನ ಅಪರಾಧವನ್ನ ಕೂಡಾ ಒಪ್ಪಿಕೊಂಡಿದ್ದಾನೆ.
ಕೊಟ್ಟೊಪ್ಪಡಂನ ಚಲ್ಲಿಕ್ಕಲ್ ಒತುಕ್ಕಂಪುರಂ ಎಸ್ಟೇಟ್ನ ರಬ್ಬರ್ ಟ್ಯಾಪರ್ ಆಗಿರುವ ಕಿಂಗ್ಪಿನ್ ವಿಲ್ಸನ್ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ.
ಇನ್ನುಳಿದ ಇಬ್ಬರು ಆರೋಪಿಗಳಾದ ಎಸ್ಟೇಟ್ ಮಾಲೀಕ ಅಬ್ದುಲ್ ಕರೀಮ್ ಮತ್ತು ಆತನ ಮಗ ರಿಯಾಜುದ್ದೀನ್ಗಾಗಿ ಹುಡುಕಾಟ ಮುಂದುವರೆದಿದೆ.
ಪೊಲೀಸ್ ತನಿಖೆಯ ಭಾಗವಾಗಿ ಪೊಲೀಸ್ ಅಧಿಕಾರಿಗಳು ವಿಲ್ಸನ್ನನ್ನು ತೋಟದ ಶೆಡ್‌ಗೆ ಕರೆದೊಯ್ದರು. ಅಲ್ಲಿ ಸ್ಫೋಟಕಗಳನ್ನು ತಯಾರಿಸಲು ಬಳಸುವ ವಸ್ತುಗಳು ಕಂಡು ಬಂದಿದ್ದು, ಅಲ್ಲಿಯೇ ಅವರು ಸ್ಫೋಟಕಗಳನ್ನು ತಯಾರಿಸಿದ್ದರು ಎಂದು ತಿಳಿದು ಬಂದಿದೆ.
ವಿಲ್ಸನ್ ಕಾಡು ಪ್ರಾಣಿಗಳನ್ನು ಬೇಟೆಯಾಡಿ ಅವುಗಳ ಮಾರಾಟ ಮಾಡುವುದರಲ್ಲಿಯೂ ಭಾಗಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಅರಣ್ಯ ಮತ್ತು ವನ್ಯಜೀವಿ ಸಂರಕ್ಷಣೆ ಮತ್ತು ಸ್ಫೋಟಕ ಕಾಯ್ದೆಯ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.