ಅಲ್ವಾರ್ (ರಾಜಸ್ಥಾನ್): ಸೇನೆಯಲ್ಲಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದ ಸೈನಿಕ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಲ್ಲಿನ ಅಲ್ವಾರ್ನ ಉದ್ಯೋಗ್ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ರಾಜಸ್ಥಾನದಲ್ಲಿ ಆತ್ಮಹತ್ಯೆಗೆ ಶರಣಾದ ಕರ್ನಾಟಕ ಮೂಲದ ಸೈನಿಕ - Indian Army news
ಸೇನೆಯಲ್ಲಿ ಕಾರು ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಕರ್ನಾಟಕ ಮೂಲದ ಸಿದ್ಧ ಮಲ್ಲಪ್ಪ ಎಂಬಾತ ಆತ್ಮಹತ್ಯೆಗೆ ಶರಣಾಗಿದ್ದಾನೆ. ರಾಜಸ್ಥಾನದ ಅಲ್ವಾರ್ನಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕಿಸಲಾಗಿದೆ.
ಮೃತ ಸೈನಿಕ ಕರ್ನಾಟಕ ಮೂಲದ ಸಿದ್ದ ಮಲ್ಲಪ್ಪ (37) ಎಂದು ಪೊಲೀಸರು ಮಾಹಿತಿ ನೀಡಿದ್ದು, ಈತ ಇಟಾ ರಾಣಾ ಕಂಟೋನ್ಮೆಂಟ್ನಲ್ಲಿ ಕಾರು ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ. ಕೆಲಸ ಮುಗಿಸಿ ಆರ್ಮಿ ಕ್ವಾಟ್ರಸ್ಗೆ ಆಗಮಿಸಿದ ಇತರೆ ಸಹೋದ್ಯೋಗಿಗಳು ಸಿದ್ಧ ಮಲ್ಲಪ್ಪ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವುದನ್ನು ಕಂಡಿದ್ದಾರೆ. ತಕ್ಷಣವೇ ಅವರನ್ನು ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ ಆಸ್ಪತ್ರೆ ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ.
ಬಳಿಕ ಅಲ್ವಾರ್ನ ರಾಜೀವ್ ಗಾಂಧಿ ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಕುಟುಂಬಸ್ಥರ ಆಗಮನದ ಬಳಿಕ ಮೃತದೇಹವನ್ನು ಹಸ್ತಾಂತರಿಸಲಾಗಿದೆ. ಸೈನಿಕನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೂಲಗಳ ಪ್ರಕಾರ ಕೌಟುಂಬಿಕ ಕಲಹದಿಂದ ಬೇಸತ್ತು ಈ ರೀತಿಯ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಪೊಲೀಸರು ತಿಳಿಸಿದ್ದಾರೆ.