ಬೆಂಗಳೂರು/ನವದೆಹಲಿ: ಸೈಬರ್ ಅಪರಾಧ ಲೋಕದಲ್ಲಿ ಮತ್ತೊಂದು ಹೊಸ ಪದ ಸೃಷ್ಟಿಯಾಗಿದೆ. ಅದುವೇ 'ಜ್ಯೂಸ್ ಜಾಕಿಂಗ್.' ದುಷ್ಕರ್ಮಿಗಳು ಮಾಡುವ ಈ ಘೋರ ವಂಚನೆಗೆ ಅಮಾಯಕರು ಬಲಿಯಾಗುತ್ತಿದ್ದಾರೆ. ಹೊಸ ತಂತ್ರದ ಮೂಲಕ ಹ್ಯಾಕರ್‌ಗಳು ನಿಮ್ಮನ್ನು ಬೆನ್ನತ್ತುವ ಸಾಧ್ಯತೆ ದಟ್ಟವಾಗಿದ್ದು, ನೀವು ಎಚ್ಚರವಾಗಿದ್ದಷ್ಟು ನಿಮಗೇ ಒಳ್ಳೆಯದು. ಎಚ್ಚರಿಕೆಯ ಹೆಜ್ಜೆಯ ಮೂಲಕ ಜಾಗೃತರಾಗುವುದನ್ನು ಬಿಟ್ಟರೆ ಇದರ ವಿರುದ್ಧ ಯಾವುದೇ ಮುನ್ನೆಚ್ಚರಿಕೆ ಕ್ರಮಗಳಿಲ್ಲ.
ಮೊಬೈಲ್ ಫೋನ್‌ನ ಚಾರ್ಜಿಂಗ್ ಕೇಬಲ್ ಅನ್ನು ಬಳಕೆದಾರರ ಅನುಕೂಲಕ್ಕಾಗಿ ಡೇಟಾ ಕೇಬಲ್ ಆಗಿ ಪರಿವರ್ತಿಸಿದಾಗಿನಿಂದ, ಮೊಬೈಲ್ ಫೋನ್‌ಗಳಲ್ಲಿ ಸಂಗ್ರಹವಾಗಿರುವ ಖಾಸಗಿ ಡೇಟಾವನ್ನು ಹ್ಯಾಕ್ ಮಾಡಲು 'ಜ್ಯೂಸ್ ಜಾಕಿಂಗ್' ಅನ್ನೋದೇ ಹ್ಯಾಕರ್‌ಗಳು ಕಂಡುಕೊಂಡ ದುಷ್ಟಮಾರ್ಗ. ಈ ವಿಧಾನದ ಮೂಲಕ ನಿಮ್ಮೆಲ್ಲಾ ಸೂಕ್ಷ್ಮ ಮಾಹಿತಿಗಳು ಕ್ಷಣಮಾತ್ರದಲ್ಲಿ ಹ್ಯಾಕರ್ಗಳ ಕೈಸೇರಿಬಿಡುತ್ತದೆ.
ವಿಮಾನ ನಿಲ್ದಾಣ, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳು, ಉದ್ಯಾನವನಗಳು ಮತ್ತು ಮಾಲ್‌ಗಳಲ್ಲಿ ಉಚಿತ ಚಾರ್ಜಿಂಗ್ ಪಾಯಿಂಟ್‌ಗಳನ್ನು ನೀಡುವ ಸಾರ್ವಜನಿಕ ಸ್ಥಳಗಳನ್ನು ಹ್ಯಾಕರ್‌ಗಳು ಗುರಿಯಾಗಿಸಿ ಜನರನ್ನು ಬಲಿಪಶುಗಳನ್ನಾಗಿಸುತ್ತಾರೆ. ಚಾರ್ಜಿಂಗ್‌ಗಾಗಿ ಬಳಸುವ ಯುಎಸ್‌ಬಿ ಪೋರ್ಟ್‌ಗಳು ಡೇಟಾ ಕೇಬಲ್ ಕೂಡಾ ಆಗಿರುವುದರಿಂದ ವ್ಯಕ್ತಿಯ ಸೂಕ್ಷ್ಮ ಖಾಸಗಿ ಮಾಹಿತಿಗಳನ್ನು ವರ್ಗಾಯಿಸುವ ಸಾಧನವೂ ಆಗಿದೆ. ಹೀಗಾಗಿ ಬ್ಯಾಂಕಿಂಗ್ ಹಾಗೂ ಸೋಷಿಯಲ್ ಮೀಡಿಯಾ ಪ್ರೊಫೈಲ್‌ಗಳು, ವೈಯಕ್ತಿಕ ಡೇಟಾಕ್ಕಾಗಿ ಬಳಸುವ ಪಾಸ್‌ವರ್ಡ್‌ಗಳ ಬಗ್ಗೆ ಹ್ಯಾಕರ್‌ಗಳು ತಿಳಿದುಕೊಂಡು, ಅದನ್ನು ಹ್ಯಾಕ್ ಮಾಡಿಬಿಡುತ್ತಾರೆ. ಅಷ್ಟೇ ಅಲ್ಲ ಅವರಿಗೆ ಬೇಕಾದ ಮಾಹಿತಿಯನ್ನು ಸರಾಗವಾಗಿ ಕದಿಯುತ್ತಾರೆ. ಅವರಿಗೆ ಬೇಕಾದಂತೆ ಪಾಸ್ವರ್ಡ್ಗಳನ್ನು ಮರುಹೊಂದಿಸಿ, ನಿಮ್ಮ ಮೊಬೈಲ್ ಫೋನ್ಅನ್ನು ನೀವೇ ಅನ್ಲಾಕ್ ಮಾಡಲಾಗದಂತೆ ನಿಮ್ಮನ್ನು ಲಾಕ್ ಮಾಡಿಬಿಡುತ್ತಾರೆ. ಅವರಿಗೆ ಬೇಕಾದ ಎಲ್ಲಾ ಗೌಪ್ಯ, ಖಾಸಗಿ ಮಾಹಿತಿಗಳನ್ನು ಕದ್ದುಕೊಂಡು, ನಿಮ್ಮನ್ನೇ ಬ್ಲ್ಯಾಕ್‌ಮೇಲ್ ಮಾಡುತ್ತಾರೆ. ಆಮೇಲೆ ಅದನ್ನೇ ಇಟ್ಟುಕೊಂಡು ಅವರಿಗೆ ಬೇಕಾದುದೆಲ್ಲವನ್ನೂ ಕಿತ್ತುಕೊಳ್ಳುತ್ತಾರೆ.