ಮುಂಬೈ(ಮಹಾರಾಷ್ಟ್ರ): ಭಾನುವಾರದಂದು ಜವಹಾರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ನಡೆದ ಹಿಂಸಾಚಾರದ ಬಗ್ಗೆ ರಾಜಕೀಯ ಮುಖಂಡರುಗಳು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಘಟನೆಗೆ ಸಂಘ ಪರಿವಾರದವರೇ ಕಾರಣ ಎಂದು ಹರಿಹಾಯ್ದಿವೆ.
ಈ ಬಗ್ಗೆ ಕಾಂಗ್ರೆಸ್ ನಾಯಕ ಕಪಿಲ್ ಸಿಬಲ್ ಮಾತನಾಡಿ, ಮುಖ ಮುಚ್ಚಿಕೊಂಡು ವಿಶ್ವವಿದ್ಯಾಲಯದ ಒಳಗಡೆ ಪ್ರವೇಶಿಸಲು ಹೇಗೆ ಸಾಧ್ಯ? ಆ ಸಮಯದಲ್ಲಿ ಪೊಲೀಸರು, ಗೃಹ ಮಂತ್ರಿಗಳು ಏನು ಮಾಡುತ್ತಿದ್ದರು. ಇದು ಸಂಚಿತ ಪಿತೂರಿಯಾಗಿದ್ದು, ತನಿಖೆ ಅವಶ್ಯಕವಿದೆ ಎಂದು ಒತ್ತಾಯಿಸಿದ್ದಾರೆ.
ಇನ್ನು ಈ ಬಗ್ಗೆ ಗೃಹ ಸಚಿವ ಅಮಿತ್ ಶಾ, ದೆಹಲಿಯ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್ ಬಳಿ ಮಾತನಾಡಿದ್ದು, ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದ (ಜೆಎನ್‌ಯು) ಪ್ರತಿನಿಧಿಗಳನ್ನು ಕರೆದು ಮಾತನಾಡುವುದಾಗಿ ಹೇಳಿದ್ದಾರೆ.
ಈ ನಡುವೆ, ಘಟನೆ ಬಗ್ಗೆ ಜೆಎನ್‌ಯು ಉಪ ಕುಲಪತಿ ಎಂ.ಜಗದೀಶ್ ಕುಮಾರ್ ಪ್ರತಿಕ್ರಿಯಿಸಿದ್ದು, ಎಲ್ಲ ವಿದ್ಯಾರ್ಥಿಗಳು ಶಾಂತಿ ಕಾಪಾಡಬೇಕಿದೆ. ಶೈಕ್ಷಣಿಕ ಚಟುವಟಿಕೆಗಳ ಅನ್ವೇಷಣೆಗೆ ಅನುಕೂಲವಾಗುವಂತೆ ವಿಶ್ವವಿದ್ಯಾಲಯವು ಎಲ್ಲ ವಿದ್ಯಾರ್ಥಿಗಳ ಪರವಾಗಿದೆ. ಮುಂದೆ ನಡೆಯಲಿರುವ ಸೆಮಿಸ್ಟರ್ ನೋಂದಣಿ ಯಾವುದೇ ಅಡೆತಡೆಯಿಲ್ಲದೆ ನಡೆಯುತ್ತದೆ ಎಂದು ಖಚಿತಪಡಿಸಿದ್ದಾರೆ.
ಜೆಎನ್ಯುನಲ್ಲಿ ನಡೆದ ಹಿಂಸಾಚಾರದ ಬಗ್ಗೆ ನಾವು ಈಗಾಗಲೇ ಎಫ್ಐಆರ್ ದಾಖಲಿಸಿಕೊಂಡಿದ್ದು, ಸಾಮಾಜಿಕ ಜಾಲತಾಣ ಹಾಗೂ ಸಿಸಿಟಿವಿ ಫೂಟೇಜ್ಗಳನ್ನು ನಮ್ಮ ತನಿಖೆಯಲ್ಲಿ ಬಳಸಿಕೊಳ್ಳಲಾಗುವುದು ಎಂದು ಡಿಸಿಪಿ ದೇವೆಂದ್ರ ಆರ್ಯ ತಿಳಿಸಿದ್ದಾರೆ.
ಇನ್ನು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿಕೆ ನೀಡಿದ್ದು, ತನಿಖೆ ಪ್ರಾರಂಭವಾಗಿದೆ ಆದ್ದರಿಂದ ಈಗ ಅದರ ಬಗ್ಗೆ ಮಾತನಾಡುವುದು ಸರಿಯಲ್ಲ, ಆದರೆ ವಿಶ್ವವಿದ್ಯಾಲಯಗಳನ್ನು ರಾಜಕೀಯದ ಕೇಂದ್ರಗಳಾಗಿ ಪರಿವರ್ತಿಸಬಾರದು, ಹಾಗು ವಿದ್ಯಾರ್ಥಿಗಳನ್ನು ರಾಜಕೀಯಕ್ಕೆ ಬಳಸಬಾರದು ಎಂದಿದ್ದಾರೆ.
ಒಟ್ಟಾರೆಯಾಗಿ ಈ ಗಲಬೆಯಿಂದಾಗಿ 25 ಕ್ಕೂ ಹೆಚ್ಚು ಜನ ಗಾಯಗೊಂಡಿದ್ದು, ಕಾಂಗ್ರೆಸ್ ಹಾಗೂ ಎಡ ಸಂಘಟನೆಗಳು ಇದನ್ನೇ ಅಸ್ತ್ರವಾಗಿಟ್ಟುಕೊಂಡು ಬಿಜೆಪಿ ಮೇಲೆ ವಾಗ್ದಾಳಿ ನಡೆಸಿದೆ.