ನವದೆಹಲಿ: 'ಜನ್ ಧನ್' ಯೋಜನೆಯು "ಗೇಮ್ ಚೇಂಜರ್" ಮತ್ತು ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
'ಜನ್ ಧನ್' ಯೋಜನೆಯ ಆರನೇ ವಾರ್ಷಿಕೋತ್ಸವ ಹಿನ್ನೆಲೆ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ. "2014ರಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದ ನಂತರ, ಸರ್ಕಾರದ ಮೊದಲ ಪ್ರಮುಖ ಯೋಜನೆಗಳಲ್ಲಿ ಇದೂ ಒಂದಾಗಿದೆ. ಇದರ ಅಡಿಯಲ್ಲಿ ಕೋಟ್ಯಂತರ ಜನರ ಬ್ಯಾಂಕ್ ಖಾತೆಗಳನ್ನು ತೆರೆಯಲಾಯಿತು. ಆರು ವರ್ಷಗಳ ಹಿಂದೆ ಬ್ಯಾಂಕಿಂಗ್ ಮಾಡುವ ಮಹತ್ವಾಕಾಂಕ್ಷೆಯ ಗುರಿಯೊಂದಿಗೆ ಪ್ರಧಾನಮಂತ್ರಿ ಜನ್ ಧನ್ ಯೋಜನೆ ಪ್ರಾರಂಭಿಸಲಾಯಿತು. ಈ ಉಪಕ್ರಮವು ಗೇಮ್ ಚೇಂಜರ್ ಆಗಿದೆ. ಅನೇಕ ಬಡತನ ನಿವಾರಣಾ ಉಪಕ್ರಮಗಳಿಗೆ ಅಡಿಪಾಯವಾಗಿ ಕಾರ್ಯನಿರ್ವಹಿಸುತ್ತಿದೆ. ಕೋಟ್ಯಂತರ ಜನರಿಗೆ ಪ್ರಯೋಜನವಾಗಿದೆ" ಎಂದು ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಜನ್ ಧನ್ ಯೋಜನೆಗೆ ಆರು ವರ್ಷ ಪೂರ್ಣ "ಪ್ರಧಾನಮಂತ್ರಿ ಜನ್ ಧನ್ ಯೋಜನೆಗೆ ಧನ್ಯವಾದಗಳು, ಹಲವಾರು ಕುಟುಂಬಗಳ ಭವಿಷ್ಯವು ಸುರಕ್ಷಿತವಾಗಿದೆ. ಹೆಚ್ಚಿನ ಸಂಖ್ಯೆಯ ಫಲಾನುಭವಿಗಳು ಗ್ರಾಮೀಣ ಪ್ರದೇಶದಿಂದ ಬಂದವರು ಮತ್ತು ಮಹಿಳೆಯರಾಗಿದ್ದಾರೆ. ಪಿಎಂ-ಜೆಡಿವೈ ಯಶಸ್ವಿಯಾಗಲು ದಣಿವರಿಯಿಲ್ಲದೆ ಶ್ರಮಿಸಿದ ಎಲ್ಲರನ್ನೂ ನಾನು ಶ್ಲಾಘಿಸುತ್ತೇನೆ. #6ಜನ್ ಧನ್ ಯೋಜನೆ" ಎಂದು ಟ್ವೀಟ್ನಲ್ಲಿ ಬರೆದುಕೊಂಡಿದ್ದಾರೆ.
ಇದುವರೆಗೆ 40 ಕೋಟಿಗೂ ಹೆಚ್ಚು ಬ್ಯಾಂಕ್ ಖಾತೆಗಳನ್ನು ತೆರೆಯಲಾಗಿದ್ದು, ಶೇ. 63ಕ್ಕೂ ಹೆಚ್ಚು ಫಲಾನುಭವಿಗಳು ಗ್ರಾಮೀಣ ಪ್ರದೇಶಗಳಿಗೆ ಸೇರಿದವರಾಗಿದ್ದಾರೆ. ಅವರಲ್ಲಿ ಶೇ. 55ಕ್ಕಿಂತ ಹೆಚ್ಚು ಮಹಿಳೆಯರು ಎಂದು ಸೂಚಿಸುವ ಗ್ರಾಫಿಕ್ಸ್ ಚಿತ್ರವನ್ನು ಟ್ವೀಟ್ನೊಂದಿಗೆ ಲಗತ್ತಿಸಿದ್ದಾರೆ.
ಈ ಯೋಜನೆಯಿಂದಾಗಿ ಅಗತ್ಯವಿರುವವರಿಗೆ ಕಲ್ಯಾಣ ಸೌಲಭ್ಯಗಳನ್ನು ನೇರವಾಗಿ ವರ್ಗಾಯಿಸಲು ಸಾಧ್ಯವಾಗಿದೆ ಎಂದು ಸರ್ಕಾರ ಹೇಳಿದೆ.