ನವದೆಹಲಿ:ಸ್ನಾತಕೋತ್ತರ ವಿದ್ಯಾರ್ಥಿಗಳಿಬ್ಬರು ದಾಂಪತ್ಯ ಜೀವನಕ್ಕೆ ಇಂದು ಕಾಲಿಟ್ಟಿದ್ದು, ಈ ಸಂದರ್ಭದಲ್ಲಿ ಪೌರತ್ವ (ತಿದ್ದುಪಡಿ) ಕಾಯ್ದೆ ಹಾಗೂ ರಾಷ್ಟ್ರೀಯ ಪೌರರ ನೋಂದಣಿ (ಎನ್‌ಆರ್‌ಸಿ) ವಿರುದ್ಧ ಮದುವೆ ಮನೆಯಲ್ಲೇ ವಿನೂತನವಾಗಿ ಪ್ರತಿಭಟನೆ ನಡೆಸಿ ಗಮನ ಸೆಳೆದಿದ್ದಾರೆ.
ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಇಬ್ಬರು ಸ್ನಾತಕೊತ್ತರ ವಿದ್ಯಾರ್ಥಿಗಳು ಹಲವು ದಿನಗಳಿಂದ ಪ್ರೀತಿಸುತ್ತಿದ್ದರು. ಇಬ್ಬರೂ ತಮ್ಮ ಕುಟುಂಬಸ್ಥರ ಒಪ್ಪಿಗೆ ಪಡೆದು ಇಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು.
ಈ ವೇಳೆ 'ನೋ ಎನ್‌ಆರ್‌ಸಿ' (ರಾಷ್ಟ್ರೀಯ ಪೌರರ ನೋಂದಣಿ ಬೇಡ), 'ನೋ ಸಿಎಎ' (ಪೌರತ್ವ ತಿದ್ದುಪಡಿ ಕಾಯ್ದೆ ಬೇಡ) ಎಂಬ ಘೋಷ ವಾಕ್ಯಗಳಿರುವ ಫಲಕಗಳನ್ನು ಹಿಡಿದುಕೊಂಡು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಅಷ್ಟೇ ಅಲ್ಲದೆ, ಮದುವೆ ಮನೆಯಲ್ಲಿ ನೆರೆದಿದ್ದ ಬಂಧು ಬಳಗವೆಲ್ಲಾ ಈ ಜೋಡಿಗೆ ಬೆಂಬಲ ನೀಡಿದ್ದಾರೆ.
ಸ್ನಾತಕೋತ್ತರ ವಿದ್ಯಾರ್ಥಿನಿ ಅಮಿನಾ ಜಕಿಯಾ (ವಧು) ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧದ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಪಾಲ್ಗೊಂಡಿದ್ದರು. ಇದಕ್ಕೂ ಮೊದಲು ಈ ಕಾಯ್ದೆ ವಿರುದ್ಧ ಜಾಮಿಯಾ ಮಿಲಿಯಾ ವಿವಿಯ ವಿದ್ಯಾರ್ಥಿಗಳು ಬೃಹತ್ ಮಟ್ಟದಲ್ಲಿ ಪ್ರತಿಭಟನೆ ನಡೆಸಿ ಎಷ್ಟೋ ವಿದ್ಯಾರ್ಥಿಗಳು ಬಂಧನಕ್ಕೆ ಒಳಗಾಗಿದ್ದರು.
ಸಿಎಎ ಮತ್ತು ಎನ್‌ಆರ್‌ಸಿ ಜಾರಿ ಆಗಬಾರದು ಎಂದು ದೇಶಾದ್ಯಂತ ಪ್ರತಿಭಟನೆಗಳು ಇನ್ನೂ ಮುಂದುವರೆದಿವೆ.