ಜೈಪುರ :ಐಸಿಎಂಆರ್ ಅನುಮತಿ ಪಡೆದ ನಂತರ ರಾಜಸ್ಥಾನದ ಜೈಪುರದಲ್ಲಿರುವ ಸವಾಯಿ ಮಾನ್ಸಿಂಗ್ ಆಸ್ಪತ್ರೆಯಲ್ಲಿ ನಡೆಸಿದ ಪ್ಲಾಸ್ಮಾ ಥೆರಪಿ ಪ್ರಯೋಗವು ಯಶಸ್ವಿಯಾಗಿದೆ.
ಇಲ್ಲಿರುವ ಎಸ್‌ಎಂಎಸ್ ಆಸ್ಪತ್ರೆ ಮತ್ತು ವೈದ್ಯಕೀಯ ಕಾಲೇಜಿನಲ್ಲಿ ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದ ನಂತರ ಕೋವಿಡ್ -19 ಸೋಂಕಿತ ಇಬ್ಬರು ವೃದ್ಧರು ಚೇತರಿಸಿಕೊಂಡಿದ್ದಾರೆ ಎಂದು ಆಸ್ಪತ್ರೆಯ ಉನ್ನತ ಮೂಲಗಳು ಮಾಹಿತಿ ನೀಡಿವೆ.
ಕೊರೊನಾ ವೈರಸ್ ರೋಗಿಗಳಿಗೆ ಪ್ಲಾಸ್ಮಾ ಚಿಕಿತ್ಸೆಯನ್ನು ಪ್ರಾರಂಭಿಸಲು ರಾಜಸ್ಥಾನ ಸರ್ಕಾರವು ಇತ್ತೀಚೆಗೆ ಐಸಿಎಂಆರ್ (ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ) ಯಿಂದ ಅನುಮೋದನೆ ಪಡೆಯಿತು. ಎಸ್‌ಎಂಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಇದನ್ನು ಈಗಾಗಲೇ ಪ್ರಾಯೋಗಿಕ ಆಧಾರದ ಮೇಲೆ ಪ್ರಾರಂಭಿಸಿರುವುದಾಗಿ ಐಸಿಎಂಆರ್‌ಗೆ ತಿಳಿಸಿತ್ತು. ರಾಜಸ್ಥಾನ ಮಾತ್ರವಲ್ಲದೇ ದೆಹಲಿ, ಕೇರಳ ಮತ್ತು ಮಧ್ಯಪ್ರದೇಶವೂ ಈ ಚಿಕಿತ್ಸೆಯನ್ನು ಪ್ರಾರಂಭಿಸಿವೆ ಎಂದು ಮೂಲಗಳು ತಿಳಿಸಿವೆ.
ಮಾರಕ ಕೊರೊನಾ ವೈರಸ್ ವಿರುದ್ಧ ಹೋರಾಡುವ ಸಾಮರ್ಥ್ಯವನ್ನು ಹೆಚ್ಚಿಸಲು COVID-19 ಸೋಂಕಿನಿಂದ ಗಂಭೀರ ಸ್ಥಿತಿಯಲ್ಲಿರುವ ರೋಗಿಗಳಿಗೆ ಈ ಪ್ಲಾಸ್ಮಾ ಚಿಕಿತ್ಸೆ ನೀಡಬಹುದು ಎಂದು ಸಂಶೋಧಕರು ಹೇಳಿದ್ದಾರೆ.