ಜಗತ್ತಿನ ಸೃಷ್ಟಿಯೇ ಒಂದು ವಿಸ್ಮಯ. ಮನುಷ್ಯರು ಸೇರಿದಂತೆ ಇಲ್ಲಿರುವ ಜೀವಿಗಳ ನಡುವೆ ನಡೆಯುವ ಸಂವಹನ - ಸಂಭಾಷಣೆ ಇನ್ನೂ ವಿಸ್ಮಯ. ವ್ಯಕ್ತಿಯೊಬ್ಬ, ಮತೋರ್ವ ವ್ಯಕ್ತಿಗೆ ಹೇಳಲಿಚ್ಛಿಸುವ ವಿಷಯವನ್ನು ಪ್ರಸ್ತುತ ಪಡಿಸುವ ಮಾಧ್ಯಮವೇ ಸಂವಹನ. ಇಲ್ಲಿ ಭಾಷೆ ಪ್ರಮುಖ ಅಂಶ. ಒಂದೇ ಭಾಷೆಯನ್ನು ಮಾತನಾಡುವ ಮತ್ತು ಅರ್ಥೈಸಬಲ್ಲ ಇಬ್ಬರು ಅಥವಾ ಹೆಚ್ಚು ಜನರ ನಡುವೆ ಸಂವಹನ ಸುಲಭ.
ಅದೇ ವಿಭಿನ್ನ ಭಾಷಾಜ್ಞಾನ ಇರುವ ಇಬ್ಬರಲ್ಲಿ ನಿರರ್ಗಳ ಸಂವಹನ ಕಷ್ಟ. ಇಂತಹ ಸಂದರ್ಭದಲ್ಲಿ ಉಪಯೋಗಕ್ಕೆ ಬರುವುದೇ 'ಅನುವಾದ'. ಇದನ್ನೇ ನಾವು ಭಾಷಾಂತರ, ತರ್ಜುಮೆ ಎಂದೆಲ್ಲಾ ಕರೆಯುತ್ತೇವೆ. ಇನ್ನೊಂದು ಕಡೆ ವಿಷಯವೊಂದನ್ನು ಸೂಕ್ಷ್ಮವಾಗಿ ಅರ್ಥೈಸಿಕೊಂಡು ಅದರ ಒಟ್ಟಾರೆ ಅಂಶವನ್ನು ಪ್ರಸ್ತುತಪಡಿಸುವುದಕ್ಕೆ ಭಾಷೆಯ ರೂಪಾಂತರವೆಂದೂ ಹೇಳುವುದುಂಟು. ಹೀಗಾಗಿ, ಭಾಷೆಯ ಅನುವಾದ ಬಹಳಷ್ಟು ಪ್ರಾಮುಖ್ಯತೆ ಪಡೆದಿದೆ.
ಜಗತ್ತಿನಲ್ಲಿ ಸುಮಾರು 7,000ಕ್ಕಿಂತಲೂ ಹೆಚ್ಚು ಮಾತನಾಡುವ ಭಾಷೆಗಳಿವೆ. ಹೀಗಾಗಿ, ಅನುವಾದ ಜಗತ್ತಿಗೆ ತುಂಬಾ ಮುಖ್ಯ. ಭಾಷಾಂತರದ ಮೂಲಕ, ಎರಡನೇ ಭಾಷೆಯೊಂದನ್ನು ಕಲಿಯದೇ ಪರಸ್ಪರ ಆಲೋಚನೆಗಳು ಮತ್ತು ಸಂಸ್ಕೃತಿಯನ್ನು ಸಂವಹನ ಮಾಡಲು ಮತ್ತು ಅರ್ಥಮಾಡಿಕೊಳ್ಳಲು ಆ ಭಾಷೆಯ ಅನುವಾದವು ಜನರಿಗೆ ಅನುವು ಮಾಡಿಕೊಡುತ್ತದೆ. ಇನ್ನೊಂದು ಕಡೆ ಜನರು ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ತಿಳಿದಿದ್ದರೂ ಸಹ, ನಾವು ನಮ್ಮ ಸ್ಥಳೀಯ ಅಥವಾ ಮಾತೃಭಾಷೆಯ ಮೂಲಕ ವಿಷಯವೊಂದನ್ನು ಉತ್ತಮವಾಗಿ ಅರ್ಥಮಾಡಿಕೊಳ್ಳುತ್ತೇವೆ ಮತ್ತು ವ್ಯಕ್ತಪಡಿಸುತ್ತೇವೆ. ಇಂತಹ ಸಂದರ್ಭದಲ್ಲಿ ನಮ್ಮ ಮಾತೃಭಾಷೆಗೆ ಬೇರೆ ಭಾಷೆಯೊಂದರಲ್ಲಿರುವ ಪಠ್ಯ ಅನುವಾದವಾಗಬೇಕಾಗುತ್ತದೆ.
ಒಂದು ಸುದ್ದಿ ಅಥವಾ ಮಾಹಿತಿಯನ್ನು ಜನಸಾಮಾನ್ಯರಿಗೆ ಕೊಡುವಲ್ಲಿ ಈ ಭಾಷಾಂತರಕಾರರು, ಪರಿಭಾಷಕರು ಮತ್ತು ವ್ಯಾಖ್ಯಾನಕಾರರು ಸುದ್ದಿಯ ಹಿಂದೆ ನಿರ್ಣಾಯಕ ಪಾತ್ರವನ್ನು ನಿರ್ವಹಿಸುತ್ತಾರೆ. ಹೀಗಾಗಿ, ವಿಶ್ವದಾದ್ಯಂತ ಇರುವ ಭಾಷಾಂತರಕಾರರು, ಮುಖ್ಯವಾಗಿ ಸುದ್ದಿ ಸಂಸ್ಥೆಗಳು ಸೆಪ್ಟೆಂಬರ್-30ರಂದುಅನುವಾದ ದಿನವಾಗಿಆಚರಿಸಿಕೊಳ್ಳುತ್ತಾರೆ.
ಜಾಗತೀಕರಣದತ್ತ ಒಗ್ಗಿರುವ ಸಮಾಜದಲ್ಲಿ ನಾವು ಬದುಕುತ್ತಿದ್ದೇವೆ. ಹೀಗಾಗಿ, ಪ್ರತಿ ರಾಷ್ಟ್ರಗಳು ಜಗತ್ತಿನ ಇತರ ರಾಷ್ಟ್ರಗಳೊಂದಿಗೆ ಸಂವಹನ ಮಾಡಲೇಬೇಕಾಗುತ್ತದೆ. ಸಂಸ್ಕೃತಿ, ವಾಣಿಜ್ಯ ಅಥವಾ ರಾಜಕೀಯ ಸಂಬಂಧಗಳ ಮೂಲಕ ಅಥವಾ ಕೇವಲ ಸಾಂಸ್ಕೃತಿಕ ವಿನಿಮಯದ ಮೂಲಕ ರಾಷ್ಟ್ರಗಳು ಪರಸ್ಪರ ಸಂಪರ್ಕ ಹೊಂದಿವೆ. ಸಾಮಾನ್ಯವಾಗಿ ಬೇರೆ ಬೇರೆ ರಾಷ್ಟ್ರಗಳ ನಡುವೆ ಸುಲಭ ಸಂವಹನ ನಡೆಸಲು ತೊಡಕುಗಳು ಇದ್ದೇ ಇರುತ್ತವೆ.
ಮುಖ್ಯವಾಗಿ ವಿಭಿನ್ನ ಭಾಷೆಗಳಿಂದಾಗಿ ತೊಡಕು ಉಂಟಾಗುತ್ತದೆ. ಯಾಕೆಂದರೆ, ಸಂವಹನ ಅಥವಾ ವಿಚಾರ ವಿನಿಮಯಗಳು ಒಂದೇ ಭಾಷೆಯನ್ನು ಮಾತನಾಡದ ದೇಶಗಳು ಅಥವಾ ಜನರ ನಡುವೆ ನಡೆಯುತ್ತದೆ. ಹೀಗಾಗಿ, ಇಲ್ಲಿ ಸಂವಹನ ಸಂಕೀರ್ಣ ಸಮಯ ಅನುಭೋಗಿಸುತ್ತದೆ. ಇದೇ ಕಾರಣಕ್ಕಾಗಿ ಸುಲಭ ಸಂವಹನಕ್ಕೆ ಭಾಷಾಂತರ ಎಂಬ ಪರಿಕಲ್ಪನೆ ಹುಟ್ಟಿದೆ. ಈ ಭಾಷಾಂತರಕಾರರ ದಿನವಾಗಿ ಸೆಪ್ಟೆಂಬರ್ 30ನ್ನು ಆಚರಿಸಲಾಗುತ್ತದೆ.
ಸೆಪ್ಟೆಂಬರ್ 30ರಂದೇ ಈ ದಿನ ಯಾಕೆ?:ಕ್ರೈಸ್ತರ ಪವಿತ್ರ ಧಾರ್ಮಿಕ ಗ್ರಂಥವಾದ ಬೈಬಲ್ ಭಾಷಾಂತರಿಸಿರುವ ಸೇಂಟ್ ಜೆರೋಮ್ ಸಾವನ್ನಪ್ಪಿದ ದಿನವನ್ನು ಭಾಷಾಂತರಕಾರರ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಸೇಂಟ್ ಜೆರೋಮ್ ಈಶಾನ್ಯ ಇಟಲಿಯ ಪಾದ್ರಿಯಾಗಿದ್ದ. ಈತ ಗ್ರೀಕ್ ಹಸ್ತಪ್ರತಿಗಳಲ್ಲಿದ್ದ ಬೈಬಲ್‌ನ ಲ್ಯಾಟಿನ್ ಭಾಷೆಗೆ ಭಾಷಾಂತರಿಸುವ ಪ್ರಯತ್ನಕ್ಕೆ ಹೆಸರುವಾಸಿಯಾಗಿದ್ದಾನೆ. ಹೀಗಾಗಿ, ಈತನನ್ನು ಅನುವಾದಕರ ಪೋಷಕ ಸಂತ(patron saint of translators) ಎಂದೇ ಕರೆಯಲಾಗುತ್ತದೆ.
ಈತ ಇಲಿಯರಿಯನ್(ಪ್ರಾಚೀನ ಗ್ರೀಕ್) ಸಂತತಿಯವನಾಗಿದ್ದು, ಈತನ ಮಾತೃಭಾಷೆ ಇಲಿಯಾರಿಯನ್ ಉಪಭಾಷೆಯಾಗಿತ್ತು. ಶಾಲೆಯಲ್ಲಿ ಲ್ಯಾಟಿನ್ ಭಾಷೆ ಕಲಿತ ಈತ, ಗ್ರೀಕ್ ಮತ್ತು ಹೀಬ್ರೂ ಭಾಷೆಗಳಲ್ಲಿ ನಿರರ್ಗಳ ಮಾತನಾಡುತ್ತಿದ್ದ. ಅದೇ ಭಾಷೆಯನ್ನು ತನ್ನ ಅಧ್ಯಯನ ಭಾಷೆಯಾಗಿ ಮಾಡಿಕೊಂಡು, ಪ್ರಯಾಣದ ವೇಳೆಯೂ ಇದೇ ಭಾಷೆಯನ್ನು ಬಳಸುತ್ತಿದ್ದ. ಈತ ಹೀಬ್ರೂ ಗೋಸ್ಪೆಲ್(ಯಹೂದಿ-ಕ್ರಿಶ್ಚಿಯನ್ ಪಠ್ಯ)ನ ಭಾಗಗಳನ್ನು ಗ್ರೀಕ್ ಭಾಷೆಗೆ ಅನುವಾದಿಸಿದ್ದಾನೆ. ಕ್ರಿಸ್ತ ಶಕ 420 ಸೆಪ್ಟೆಂಬರ್ 30ರಂದು ಬೆಥ್ಲೆಹೇಂ ಬಳಿ ಈತ ಸಾವನ್ನಪ್ಪಿದ. ಹೀಗಾಗಿ ಈತ ಸಾವನ್ನಪ್ಪಿದ ದಿನವನ್ನು ಭಾಷಾಂತರ ದಿನವನ್ನಾಗಿ ಆಚರಿಸಲಾಗುತ್ತದೆ.
ವಿಶ್ವಸಂಸ್ಥೆಯು 2005ರಿಂದ ಪ್ರತಿವರ್ಷವೂ ತನ್ನ ಎಲ್ಲ ಸಿಬ್ಬಂದಿ, ಮಾನ್ಯತೆ ಪಡೆದ ಶಾಶ್ವತ ನಿಯೋಗದ ಸಿಬ್ಬಂದಿ ಮತ್ತು ಆಯ್ದ ಪಾಲುದಾರ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳನ್ನು 'ವಿಶ್ವಸಂಸ್ಥೆ ಸೇಂಟ್ ಜೆರೋಮ್ ಅನುವಾದ ಸ್ಪರ್ಧೆ'ಯಲ್ಲಿ ಸ್ಪರ್ಧಿಸಲು ಆಹ್ವಾನಿಸುತ್ತದೆ. ಈ ಸ್ಪರ್ಧೆಯ ಮೂಲಕ ಅರೇಬಿಕ್, ಚೈನೀಸ್, ಇಂಗ್ಲಿಷ್, ಫ್ರೆಂಚ್, ರಷ್ಯನ್, ಸ್ಪ್ಯಾನಿಷ್ ಮತ್ತು ಜರ್ಮನ್ ಭಾಷೆಗಳಲ್ಲಿ ಅತ್ಯುತ್ತಮ ಅನುವಾದ ಹಾಗೂ ಅನುವಾದಕರಿಗೆ ಪ್ರಶಸ್ತಿ ನೀಡಲಾಗುತ್ತದೆ. ಅಲ್ಲದೆ ಬಹುಭಾಷಾ ಸಿದ್ಧಾಂತವನ್ನು ಆಚರಿಸಲು ಮತ್ತು ಬಹುಪಕ್ಷೀಯ ರಾಜತಾಂತ್ರಿಕತೆಯಲ್ಲಿ ಅನುವಾದಕರು ಮತ್ತು ಇತರ ಭಾಷಾ ವೃತ್ತಿಪರರ ಪ್ರಮುಖ ಪಾತ್ರವನ್ನು ಈ ಸ್ಪರ್ಧೆ ಎತ್ತಿ ತೋರಿಸುತ್ತದೆ.
ಭಾಷಾಂತರದ ಮಹತ್ವ:ಗುಣಮಟ್ಟದ ಭಾಷಾ ಅನುವಾದವು ಸಂವಹನದ ಅಂತರ ಕಡಿಮೆ ಮಾಡುತ್ತದೆ. ಇದು ಭಾಷೆಯ ವಿಸ್ತಾರ ಹೆಚ್ಚಿಸುವುದರೊಂದಿಗೆ, ವಿಚಾರವೊಂದನ್ನು ಹಲವರಿಗೆ ಸರಳ ರೀತಿ ತಲುಪಿಸಲು ನೆರವಾಗುತ್ತದೆ. ಸಾಂಪ್ರದಾಯಿಕ ಇಟ್ಟಿಗೆ ಮತ್ತು ಗಾರೆ ವ್ಯವಹಾರಗಳಾಗಲಿ ಅಥವಾ ಆನ್‌ಲೈನ್ ಉದ್ಯಮವಾಗಲಿ, ಹೆಚ್ಚುತ್ತಿರುವ ಆನ್‌ಲೈನ್ ಜನಸಂಖ್ಯೆಯೊಂದಿಗೆ ಅನುವಾದ ಸೇವೆಗಳು ಲಾಭದಾಯಕ ಮಾರುಕಟ್ಟೆಯನ್ನು ನೀಡುತ್ತದೆ. ಇದು 20-30 ವರ್ಷಗಳ ಹಿಂದೆ ಸಾಧ್ಯವಾಗುತ್ತಿರಲಿಲ್ಲ. ಜಾಗತೀಕರಣದತ್ತ ಒಗ್ಗಿಕೊಂಡಿರುವ ಈ ಯುಗದಲ್ಲಿ ಜನರು ಗುಣಮಟ್ಟದ ಅನುವಾದ ಮತ್ತು ಅದರ ಪ್ರಾಮುಖ್ಯತೆಯತ್ತ ತೆರೆದುಕೊಂಡಿರುವುದಕ್ಕೆ ಇದೇ ಕಾರಣ.
ಅನುವಾದವು ಹೆಚ್ಚು ಚಾಲ್ತಿಯಲ್ಲಿರುವ ಪ್ರಮುಖ ಕ್ಷೇತ್ರಗಳು ಹೀಗಿವೆ...
1. ಬಹುರಾಷ್ಟ್ರೀಯ ಕಂಪನಿ(Multinational Company)ಗಳ ಬೆಳವಣಿಗೆ
ವಿಶ್ವದ ಬೇರೆ ಬೇರೆ ರಾಷ್ಟ್ರಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಕಂಪನಿಗಳು ಮತ್ತು ವ್ಯವಹಾರಗಳಲ್ಲಿ ಭಾಷಾಂತರದ ಬಳಕೆ ಇದ್ದೇ ಇದೆ. ಪ್ರಪಂಚದಾದ್ಯಂತ ಇರುವ ವಿವಿಧ ಜಾಗತಿಕ ಕಚೇರಿಗಳು ಮತ್ತು ಶಾಖೆಗಳಿಂದ ಮಾಹಿತಿಯನ್ನು ಹಂಚಿಕೊಳ್ಳಲು ಮತ್ತು ಸ್ವೀಕರಿಸಲು ಭಾಷಾಂತರ ಮತ್ತು ಭಾಷಾಂತರಕಾರರು ಅತ್ಯಗತ್ಯ. ಬೇರೆ ರಾಷ್ಟ್ರಗಳಿಂದ ಹಂಚಲಾದ ಮಾಹಿತಿಯನ್ನು ಸ್ಥಳೀಯ ಆದ್ಯತೆಯ ಭಾಷೆಗೆ ಅನುವಾದಿಸುವ ಅಗತ್ಯವಿರುತ್ತದೆ. ಕಂಪನಿಗಳು ಸ್ಥಳೀಯ ವ್ಯವಹಾರಗಳೊಂದಿಗೆ ಹೊಂದಾಣಿಕೆ ಮಾಡಿಕೊಳ್ಳಲು, ಸ್ಥಳೀಯ ವ್ಯವಹಾರದೊಂದಿಗೆ ಆರೋಗ್ಯಕರವಾಗಿ ಸ್ಪರ್ಧಿಸಲು ಅಥವಾ ಸರ್ಕಾರದೊಂದಿಗೆ ಪ್ರಸ್ತಾಪಗಳನ್ನು ಮಾಡುವಾಗ ಅನುವಾದವು ಅತ್ಯಗತ್ಯವಾಗಿರುತ್ತದೆ.
2. ಸಾಂಸ್ಕೃತಿಕ ವಿನಿಮಯ
ಸಂಗೀತ, ಸಾಹಿತ್ಯ, ಚಲನಚಿತ್ರ ಸೇರಿದಂತೆ ಹಲವಾರು ಇತರ ಕಲಾ ಪ್ರಕಾರಗಳು ಜಾಗತಿಕ ಗಡಿಗಳ ಎಲ್ಲೆಗಳನ್ನ ಮೀರಿ ಸಾಗಿವೆ. ಸ್ಥಳೀಯ ಭಾಷೆ ಹಾಗೂ ಭಾವನೆಗಳನ್ನು ಪ್ರತಿಬಿಂಬಿಸಲು ಹಲವು ಚಲನಚಿತ್ರಗಳು ಬೇರೆ ಭಾಷೆಗಳಿಗೆ ಪರಿಣಾಮಕಾರಿಯಾಗಿ ಅನುವಾದಿಸಲ್ಪಟ್ಟಿವೆ. ಅನುವಾದಿತ ಮತ್ತು ಉಪಶೀರ್ಷಿಕೆ(subtitle) ಹೊಂದಿರುವ ಚಲನಚಿತ್ರಗಳು ಇಂದು ಜಾಗತಿಕ ಚಲನಚಿತ್ರೋದ್ಯಮಕ್ಕೆ ಹೆಚ್ಚಿನ ಆದಾಯ ತಂದು ಕೊಡುತ್ತಿದೆ. ಬೇರೆ ಬೇರೆ ರಾಷ್ಟ್ರಗಳ ಚಲನಚಿತ್ರಗಳು ಇಂದು ಹಲವಾರು ಇತರ ಭಾಷೆಗಳಿಗೆ ಅನುವಾದಗೊಂಡು ಅಥವಾ ಡಬ್ಬಿಂಗ್ ಆಗಿ ಹಲವು ದೇಶಗಳ ಜನರಿಗೆ ತಲುಪುತ್ತಿವೆ. ಚಲನಚಿತ್ರೋದ್ಯಮ ಮಾತ್ರವಲ್ಲದೆ, ಭಾಷಾಂತರಗೊಂಡ ಸಂಗೀತ ಮತ್ತು ಸಾಹಿತ್ಯ ಕೂಡಾ ಕಲಾವಿದರಿಗೆ ಹೆಚ್ಚಿನ ರಾಯಧನ ಮತ್ತು ಅಂತಾರಾಷ್ಟ್ರೀಯ ಖ್ಯಾತಿಯನ್ನು ಕೊಡುತ್ತಿದೆ.
3. ರಾಷ್ಟ್ರಗಳ ವಿದೇಶಾಂಗ ವ್ಯವಹಾರಗಳು