ನವದೆಹಲಿ:ದೇಶದಲ್ಲಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹೀಗಾಗಿ ಈ ತಿಂಗಳ ಕೊನೆಯವರೆಗೆ (ಜುಲೈ 31) ಅಂತಾರಾಷ್ಟ್ರೀಯ ವಿಮಾನಯಾನ ಹಾರಾಟ ಸೇವೆಯನ್ನು ಕೇಂದ್ರ ಸರ್ಕಾರ ರದ್ದು ಮಾಡಿದೆ.
ಮಾರ್ಚ್ 23 ರಿಂದ ದೇಶದಲ್ಲಿ ಕೊರೊನಾ ಹಾವಳಿ ಕಾರಣ ದೇಶದಲ್ಲಿ ಲಾಕ್ಡೌನ್ ಜಾರಿಯಲ್ಲಿದೆ. ಈ ಮಧ್ಯೆ ಇದೀಗ ಅನ್ಲಾಕ್ 2.0 ಜಾರಿಗೊಂಡಿದ್ದು, ಕೆಲವು ನಿಯಮಗಳನ್ನು ಸಡಿಲಗೊಳಿಸಲಾಗಿದೆ. ಆದರೂ ಸದ್ಯದ ಪರಿಸ್ಥಿತಿಯಲ್ಲಿ ವಿಮಾನಯಾನ ಸೇವೆ ಆರಂಭಿಸಲು ಸಾಧ್ಯವಿಲ್ಲ ಎಂದು ಕೇಂದ್ರ ವಿಮಾನಯಾನ ಸಚಿವಾಲಯ ತಿಳಿಸಿದೆ.
ಅಮೆರಿಕ, ಕೆನಡಾ, ಯುರೋಪಿಯನ್ ದೇಶಗಳು ಹಾಗೂ ಗಲ್ಫ್ ದೇಶಗಳೂ ಸೇರಿದಂತೆ ಆಸ್ಟ್ರೇಲಿಯಾ, ಚೀನಾ, ಸಿಂಗಾಪೂರ್, ಜರ್ಮನಿ ಹಾಗೂ ಇತರೆ ದೇಶಗಳೊಂದಿಗೆ ಈ ಕುರಿತು ಮಾತುಕತೆ ನಡೆಸಲಾಗಿದೆ ಎಂದು ಭಾರತೀಯ ವಿಮಾನಯಾನ ನಿಲ್ದಾಣ ಪ್ರಾಧಿಕಾರದ ಅಧ್ಯಕ್ಷ ಅರವಿಂದ್ ಸಿಂಗ್ ತಿಳಿಸಿದ್ದಾರೆ.
ದೇಶಿಯ ವಿಮಾನಗಳ ಹಾರಾಟದ ಪ್ರಮಾಣವನ್ನು ಸದ್ಯದ ಶೇ.33ರಿಂದ ಶೇ 45ಕ್ಕೆ ಏರಿಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಇದನ್ನು ಮತ್ತಷ್ಟು ಏರಿಸುವ ಬಗ್ಗೆ ಅವರು ಮಾಹಿತಿ ನೀಡಿದ್ದಾರೆ.
ವಿದೇಶದಲ್ಲಿರುವ ಭಾರತೀಯರನ್ನು ಒಂದೇ ಭಾರತ್ ಮಿಷನ್ ಅಡಿ ಸ್ವದೇಶಕ್ಕೆ ಕರೆ ತರುವ ಕಾರ್ಯ ಮುಂದುವರೆದಿದೆ. ಇದರಲ್ಲಿ ಯಾವುದೇ ರೀತಿಯ ಬದಲಾವಣೆಯಾಗಲ್ಲ ಎಂದು ಅವರು ತಿಳಿಸಿದ್ದಾರೆ.