ಬೆಂಗಳೂರು: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ) ನಿರ್ಮಿತ ಸ್ವದೇಶಿ ತಂತ್ರಜ್ಞಾನದ ‘ಜಿಸ್ಯಾಟ್-30’ ಉಪಗ್ರಹ ಯಶಸ್ವಿಯಾಗಿ ಉಡಾವಣೆಯಾಯಿತು.
ಇಸ್ರೋದ 'ಜಿಸ್ಯಾಟ್-30' ಉಪಗ್ರಹ ಯಶಸ್ವಿ ಉಡಾವಣೆ
ಬಾಹ್ಯಾಕಾಶ ಕ್ಷೇತ್ರದಲ್ಲಿನ ಸಾಧನೆ ಮೂಲಕ ಭಾರತದತ್ತ ಜಗತ್ತು ತಿರುಗಿ ನೋಡುವಂತೆ ಮಾಡುತ್ತಿರುವ ಇಸ್ರೋ ಇದೀಗ ಜಿಸ್ಯಾಟ್-30 ಉಪಗ್ರಹವನ್ನು ಉಡಾವಣೆ ಮಾಡಿದೆ. ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಕಳುಹಿಸಿದೆ.
ದಕ್ಷಿಣ ಅಮೆರಿಕದ ಫ್ರೆಂಚ್ ಗಯಾನಾ ಬಾಹ್ಯಾಕಾಶ ಕೇಂದ್ರದಿಂದ ಭಾರತೀಯ ಕಾಲಮಾನದ ಪ್ರಕಾರ ರಾತ್ರಿ 2.35ಕ್ಕೆ ಎರೇನ್ ಲಾಂಚ್ ಕಾಂಪ್ಲೆಕ್ಸ್ ಉಡ್ಡಯನ ಕೇಂದ್ರದಿಂದ 'ಎರೇನ್ 5' ರಾಕೆಟ್ ಮೂಲಕ ಜಿಸ್ಯಾಟ್-30 ನಭಕ್ಕೆ ಹಾರಿದೆ ಎಂದು ಇಸ್ರೋ ಮಾಹಿತಿ ನೀಡಿದೆ. 'ಎರೇನ್ 5' ಉಡಾವಣ ವಾಹನವು ಇಂದು ಭಾರತದ ಜಿಟ್ಯಾಟ್-30 ಜೊತೆ ಫ್ರೆಂಚ್ನ EUTELSAT KONNECT ಉಪಗ್ರಹವನ್ನು ಕೂಡ ಹೊತ್ತು ನಭಕ್ಕೆ ಜಿಗಿದಿದೆ.
3,357 ಕೆಜಿ ತೂಕದ ಜಿಸ್ಯಾಟ್-30 ಉಪಗ್ರಹವು ಮುಂದಿನ 15 ವರ್ಷಗಳ ಕಾಲ ದೂರಸಂಪರ್ಕ ಸೇವೆ ಒದಗಿಸಲಿದೆ. ಡಿಟಿಹೆಚ್, ಟೆಲಿಪೋರ್ಟ್ ಸೇವೆ, ಟೆಲಿವಿಷನ್ ಅಪ್ ಲಿಂಕಿಂಗ್ ಹಾಗೂ ಡೌನ್ ಲಿಂಕಿಂಗ್ ಸೇರಿ ಹಲವು ಸಂವಹನ ಆಧಾರಿತ ಸೇವೆಗಳನ್ನು ಸಿ-ಬ್ಯಾಂಡ್ ಮೂಲಕ ಇದು ನೀಡಲಿದೆ. ‘ಜಿಸ್ಯಾಟ್-30’ ಉಪಗ್ರಹವು ಇಸ್ರೋದ ಈ ಹಿಂದಿನ ಇನ್ಸ್ಯಾಟ್/ಜಿಸ್ಯಾಟ್ನ ಮುಂದುವರಿದ ಸಿರೀಸ್.