ನವದೆಹಲಿ: ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಭಾರತೀಯ ವಾಯುಪಡೆ ಶ್ರೀನಗರ ವಾಯುನೆಲೆಯಿಂದ ಪಶ್ಚಿಮ ವಲಯಕ್ಕೆ ವರ್ಗಾವಣೆ ಮಾಡಲಾಗಿದೆ.
ಭಾರತದ ಗಡಿಯೊಳಗೆ ನುಗ್ಗಿದ ಪಾಕ್ ವಿಮಾನವನ್ನು ಹೊಡೆದುರುಳಿಸುವ ವೇಳೆ ಆಕಸ್ಮಿಕವಾಗಿ ಪಾಕಿಗಳಿಂದ ಬಂಧಿತರಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನ ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಿತ್ತು. ಅಭಿನಂದನ್ ಅವರ ಭದ್ರತೆಯ ವಿಚಾರದ ದೃಷ್ಟಿಯಿಂದ ವರ್ಗಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ಅಲ್ಲದೆ ಅಭಿನಂದನ್ ಅವರಿಗೆ ಯುದ್ಧ ಸಮಯದಲ್ಲಿ ಯೋಧರ ಶೌರ್ಯ ಪ್ರದರ್ಶನಕ್ಕೆ ಭಾರತ ಸರ್ಕಾರ ಕೊಡಮಾಡುವ ಮೂರನೇ ಪ್ರತಿಷ್ಠಿತ ವೀರಚಕ್ರ ಪ್ರಶಸ್ತಿ ನೀಡಬೇಕು ಎಂದು ಭಾರತೀಯ ವಾಯು ಸೇನೆ ಶಿಫಾರಸು ಮಾಡಿದೆ.
ಫೆಬ್ರವರಿ 14ರಂದು ಪುಲ್ವಾಮದಲ್ಲಿ ಜೈಷೆ ಉಗ್ರ ನಡೆಸಿದ್ದ ಭಯಾನಕ ದಾಳಿಯಲ್ಲಿ 45ಕ್ಕೂ ಹೆಚ್ಚು ಸಿಆರ್ಪಿಎಫ್ ಯೋಧರು ಹುತಾತ್ಮರಾಗಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ, ಪಾಕ್ ಆಕ್ರಮಿತ ಕಾಶ್ಮೀರದೊಳಗೆ ನುಗ್ಗಿ ಜೈಷೆ ಉಗ್ರರ ನೆಲೆಗಳನ್ನು ಧ್ವಂಸ ಮಾಡಿತ್ತು. ಇದರಿಂದ ಕೋಪಗೊಂಡ ಪಾಕ್ ತನ್ನ ವಾಯುಪಡೆಯ ವಿಮಾನವನ್ನು ಭಾರತದ ಗಡಿಯೊಳಗೆ ನುಗ್ಗಿಸಲು ಯತ್ನಿಸಿತ್ತು. ಆದರೆ ಭಾರತದ ವಾಯುಪಡೆ, ಪಾಕಿಸ್ತಾನದ ಎಫ್-16 ಯುದ್ಧ ವಿಮಾನವನ್ನು ಹೊಡೆದುರುಳಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಾಕಿಸ್ತಾನ ಪ್ರವೇಶಿಸಿದ್ದ ಅಭಿನಂದನ್ ಅವರನ್ನು ಪಾಕ್ ಆರ್ಮಿ ಬಂಧಿಸಿತ್ತು.
ಇದಾದ ಕೆಲ ದಿನದಲ್ಲೇ ಭಾರತದ ಒತ್ತಡಕ್ಕೆ ಮಣಿದಿದ್ದ ಇಮ್ರಾನ್ ಖಾನ್ ಸರ್ಕಾರ ಅಭಿನಂದನ್ರನ್ನು ಭಾರತಕ್ಕೆ ಒಪ್ಪಿಸಿತ್ತು.