ಹೈದರಾಬಾದ್: ದೇಶದಲ್ಲಿ ಕೊರೊನಾ ವೈರಸ್ ಅಬ್ಬರ ದಿನದಿಂದ ದಿನಕ್ಕೆ ವೇಗ ಪಡೆದುಕೊಳ್ಳುತ್ತಿದ್ದು, ಕಳೆದ 24 ಗಂಟೆಯಲ್ಲಿ ಬರೋಬ್ಬರಿ 14,821 ಹೊಸ ಕೋವಿಡ್ ಪಾಸಿಟಿವ್ ಕೇಸ್ಗಳು ಪತ್ತೆಯಾಗಿವೆ.
ಈ ಮೂಲಕ ದೇಶದಲ್ಲಿ 4,25,282 ಕೊರೊನಾ ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟು 13,699 ಜನರು ಸಾವನ್ನಪ್ಪಿದ್ದಾರೆ. ಉಳಿದಂತೆ ಕಳೆದ 24 ಗಂಟೆಯಲ್ಲಿ 9,440 ಕೋವಿಡ್ ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದ್ದು, ಸದ್ಯ ಗುಣಮುಖರಾಗುತ್ತಿರುವವರ ಪ್ರಮಾಣ ಶೇ. 55.77 ಆಗಿದೆ ಎಂದು ತಿಳಿಸಿದೆ. ಜಾಗತಿಕವಾಗಿ ಹೋಲಿಕೆ ಮಾಡಿದಾಗ ದೇಶದಲ್ಲಿ ಕೊರೊನಾ ಹರಡುತ್ತಿರುವ ಪರಿ ಕಡಿಮೆ ಇದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ. ಈ ಹಿಂದಿನ ದಿನಗಳಿಗೆ ಹೋಲಿಸಿ ನೋಡಿದಾಗ ಇದೀಗ ದೇಶದಲ್ಲಿ ಟೆಸ್ಟಿಂಗ್ ಮಾಡುವುದು ಮತ್ತಷ್ಟು ವೇಗ ಪಡೆದುಕೊಂಡಿದ್ದು, ಕಳೆದ 24 ಗಂಟೆಯಲ್ಲಿ 1,43,267 ಜನರಿಗೆ ಕೊರೊನಾ ಟೆಸ್ಟ್ ಮಾಡಲಾಗಿದೆ ಎಂದು ತಿಳಿಸಿದೆ.
ಸದ್ಯ ದೇಶದಲ್ಲಿ 1,74,387 ಆ್ಯಕ್ಟೀವ್ ಕೇಸ್ಗಳಿದ್ದು, ಉಳಿದಂತೆ 2,37,196 ಜನರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ಮಹಾರಾಷ್ಟ್ರದಲ್ಲಿ 1,35,796 ಕೋವಿಡ್ ಪ್ರಕರಣಗಳಿದ್ದು, ಇದರಲ್ಲಿ 61,793 ಆ್ಯಕ್ಟೀವ್ ಕೇಸ್ಗಳಿವೆ. 6,283 ಜನರು ಸಾವನ್ನಪ್ಪಿದ್ದಾರೆ.