ರೂರ್ಕಿ:ಕೊರೊನಾ ವೈರಸ್ ವಿರುದ್ಧ ದೇಶಾದ್ಯಂತ ಹೋರಾಟ ನಡೆದಿರುವ ಬೆನ್ನಲ್ಲೇ ಐಐಟಿ ರೂರ್ಕಿಯಿಂದ ಖುಷಿಯ ಸುದ್ದಿ ಹೊರಬಂದಿದೆ. ಐಐಟಿ ರೂರ್ಕಿ ತಂತ್ರಜ್ಞರು ಕಡಿಮೆ ಖರ್ಚಿನ ಹಾಗೂ ಎಲ್ಲೆಂದರಲ್ಲಿ ಕೊಂಡೊಯ್ಯಬಹುದಾದ (ಪೋರ್ಟೆಬಲ್) ವೆಂಟಿಲೇಟರ್ ಆವಿಷ್ಕರಿಸಿದ್ದಾರೆ. ದೇಶದಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿರುವ ಈ ಸಮಯದಲ್ಲಿ ಈ ಆವಿಷ್ಕಾರ ಎಲ್ಲಿಲ್ಲದ ಮಹತ್ವ ಪಡೆದುಕೊಂಡಿದೆ.
ಈ ಪ್ರಾಣ ವಾಯುವಿನ ವಿಶೇಷತೆ ಏನು?
"ಪ್ರಾಣ-ವಾಯು" ಎಂಬ ಹೆಸರಿನ ಈ ಕ್ಲೋಸ್ಡ್ ಲೂಪ್ ವೆಂಟಿಲೇಟರನ್ನು ಎಐಐಎಂಎಸ್ ಋಷಿಕೇಶ ಸಹಯೋಗದಲ್ಲಿ ನಿರ್ಮಿಸಲಾಗಿದ್ದು, ಇದು ಅತ್ಯಾಧುನಿಕ ಸೌಲಭ್ಯಗಳಿಂದ ಸುಸಜ್ಜಿತವಾಗಿದೆ. ರೋಗಿಗೆ ಅಗತ್ಯವಿರುವಷ್ಟು ಆಕ್ಸಿಜನ್ ಪೂರೈಸುವ ಪ್ರೈಂ ಮೂವರ್ ನಿಯಂತ್ರಿತ ಆಪರೇಶನ್ ಆಧರಿತವಾಗಿರುವ ಇದು ಸ್ವಯಂಚಾಲಿತವಾಗಿ ಕೆಲಸ ಮಾಡುತ್ತದೆ. ಇದರಲ್ಲಿ ಟೈಡಲ್ ವಾಲ್ಯೂಮ್ ಹಾಗೂ ಪ್ರತಿ ನಿಮಿಷದ ಉಸಿರಾಟವನ್ನು ನಿಯಂತ್ರಿಸುವ ವ್ಯವಸ್ಥೆಯೂ ಇದೆ. ಎಲ್ಲ ವಯೋಮಾನದವರಿಗೂ ಇದು ಉಪಯುಕ್ತವಾಗಿದ್ದು, ವಯೋವೃದ್ಧರಿಗೆ ವಿಶೇಷವಾಗಿ ಅನುಕೂಲಕರವಾಗಿದೆ. ಈಗಾಗಲೇ ರೋಗಿಗಳ ಮೇಲೆ ಯಶಸ್ವಿಯಾಗಿ ಇದರ ಮಾದರಿ ಪ್ರೊಟೊಟೈಪ್ ಪರೀಕ್ಷೆ ನಡೆಸಲಾಗಿದೆ.
ಅಲ್ಲದೆ ಇದು ಕೆಲಸ ಮಾಡಲು ಕಾಂಪ್ರೆಸ್ಡ್ ಗಾಳಿಯ ಅವಶ್ಯಕತೆ ಇರುವುದಿಲ್ಲ. ವಿಶೇಷ ಸಂದರ್ಭಗಳಲ್ಲಿ ಆಸ್ಪತ್ರೆಯ ಯಾವುದೇ ನಿರ್ದಿಷ್ಟ ವಾರ್ಡ್ ಒಂದನ್ನು ಐಸಿಯು ಆಗಿ ಬದಲಾವಣೆ ಮಾಡುವ ಸಂದರ್ಭದಲ್ಲಿ ಇದು ಬಹಳ ಉಪಯುಕ್ತವಾಗಿದೆ. ರಿಯಲ್ ಟೈಂ ಸ್ಪೈರೋಮೆಟ್ರಿ ಮತ್ತು ಅಲಾರಂ ಅಳವಡಿಸಿರುವುದರಿಂದ ಸಂಪೂರ್ಣ ಸುರಕ್ಷಿತವೂ ಆಗಿದೆ.
ಐಐಟಿ ರೂರ್ಕಿಯ ಪ್ರೊ. ಅಕ್ಷಯ ದ್ವಿವೇದಿ, ಪ್ರೊ. ಅರೂಪ್ ಕುಮಾರ ದಾಸ್ ಹಾಗೂ ಋಷಿಕೇಶ ಎಐಐಎಂಎಸ್ನ ಡಾ. ದೇವೇಂದ್ರ ತ್ರಿಪಾಠಿ ಇವರ ತಂಡ ವೆಂಟಿಲೇಟರ್ ಅನ್ನು ಅಭಿವೃದ್ಧಿಪಡಿಸಿದೆ. ಕಳೆದ ಒಂದು ವಾರದ ಹಿಂದಷ್ಟೇ ಪ್ರಯೋಗಗಳನ್ನು ಆರಂಭಿಸಿದ್ದ ತಂಡ ಈಗ ವೆಂಟಿಲೇಟರ್ ಆವಿಷ್ಕರಿಸಿದ್ದು ಶ್ಲಾಘನೀಯ.