ಕರ್ನಾಟಕ

karnataka

ETV Bharat / bharat

ಕೋವಿಡ್  ಸಾವುಗಳ ಸೂಕ್ತ ದಾಖಲೀಕರಣ: ಐಸಿಎಂಆರ್‌ನಿಂದ ಮಾರ್ಗದರ್ಶಿ ಸೂತ್ರ - ಕೊವಿಡ್​_19

ಕೋವಿಡ್‌-19ನಿಂದ ಸಂಭವಿಸುವ ಸಾವುಗಳ ದಾಖಲೀಕರಣಕ್ಕಾಗಿ ಹೊಸ ಮಾರ್ಗದರ್ಶಿ ಸೂತ್ರಗಳನ್ನು ಹೊರಡಿಸಿರುವ ಐಸಿಎಂಆರ್‌, ನ್ಯುಮೋನಿಯಾ ಮತ್ತು ಹೃದಯ ಸ್ತಂಭನಕ್ಕೆ ಇದು ಕಾರಣವಾಗುವಾಗ “ಸಾವಿಗೆ ನಿಜವಾದ ಕಾರಣ” ಕೋವಿಡ್‌-19 ಎಂದು ನಮೂದಿಸುವಂತೆ ವೈದ್ಯರಿಗೆ ಸೂಚನೆ ನೀಡಿದೆ. ಇಂತಹ ಲಕ್ಷಣಗಳಿಲ್ಲದೇ ಇದ್ದಾಗ ಕೂಡಾ, ಸೂಕ್ತ ರೀತಿಯ ಪರೀಕ್ಷಾ ಫಲಿತಾಂಶಗಳಿಲ್ಲದ ಸಾವಿನ ಪ್ರಕರಣಗಳನ್ನು ಸಹ “ಸಂಭವನೀಯ ಕೋವಿಡ್-‌19”ನಿಂದಾಗಿ ಸಂಭವಿಸಿದ ಸಾವು ಎಂದು ಅರ್ಥೈಸಲಾಗುತ್ತಿದೆ ಎಂದು ಹೇಳಿದೆ.

ICMR issues guidelines for appropriate recording of COVID-19 deaths
ಕೋವಿಡ್-‌೧೯ ಸಾವುಗಳ ಸೂಕ್ತ ದಾಖಲೀಕರಣ: ಐಸಿಎಂಆರ್‌ನಿಂದ ಮಾರ್ಗದರ್ಶಿ ಸೂತ್ರಗಳು

By

Published : May 13, 2020, 4:18 PM IST

ನವದೆಹಲಿ:ಇನ್ನು ಮುಂದೆ ನ್ಯುಮೋನಿಯಾ, ಹೃದಯ ಸ್ತಂಭನ ಅಥವಾ ರಕ್ತದಲ್ಲಿ ಗೆಡ್ಡೆಕಟ್ಟಿದಂತಹ ಇತರ ಕಾರಣಗಳಿಗಾಗಿ ಸಂಭವಿಸುವ ಸಾವುಗಳಿಗೆ ನೈಜ ಕಾರಣ ಕೋವಿಡ್‌-19 ಎಂದು ದಾಖಲಿಸಲಾಗುವುದು ಎಂದು, ಈ ರೋಗದಿಂದಾಗಿ ಭಾರತದಲ್ಲಿ ಸಂಭವಿಸುವ ಸಾವುಗಳ ದಾಖಲೀಕರಣಕ್ಕೆ ಸಂಬಂಧಿಸಿದಂತೆ, ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಇಂಡಿಯನ್‌ ಕೌನ್ಸಿಲ್‌ ಆಫ್‌ ಮೆಡಿಕಲ್‌ ರೀಸರ್ಚ್‌ – ಐಸಿಎಂಆರ್‌) ತನ್ನ ಹೊಸ ಮಾರ್ಗದರ್ಶಿ ಸೂತ್ರಗಳಲ್ಲಿ ಸ್ಪಷ್ಟಪಡಿಸಿದೆ.

ಸಾರ್ವಜನಿಕ ಆರೋಗ್ಯಕ್ಕೆ ಸಂಬಂಧಿಸಿದಂತೆ ಕೋವಿಡ್‌-19 ಸಾಂಕ್ರಾಮಿಕದಿಂದ ಉಂಟಾಗುವ ಸಾವುಗಳ ದಾಖಲೀಕರಣದ ಮಹತ್ವವನ್ನು ವಿವರಿಸಿರುವ ಐಸಿಎಂಆರ್‌, ಕೋವಿಡ್‌-೧೯ ಹೊಸ ರೋಗವಾಗಿದ್ದು ಸಾಂಕ್ರಾಮಿಕ ಸ್ವಭಾವವನ್ನು ಹೊಂದಿದೆ. ಎಲ್ಲಾ ದೇಶಗಳ ಎಲ್ಲಾ ಸಮುದಾಯಗಳ ಮೇಲೆ ಪರಿಣಾಮ ಬೀರುವ ಈ ರೋಗದ ಕುರಿತು ದೃಢವಾದ ದತ್ತಾಂಶವನ್ನು ಹೊಂದುವ ಅವಶ್ಯಕತೆಯಿದೆ. ಸಾರ್ವಜನಿಕ ಆರೋಗ್ಯದ ಮೇಲೆ ಈ ಕಾಯಿಲೆ ಬೀರುವ ಪರಿಣಾಮಗಳನ್ನು ಅಂದಾಜಿಸುವ ದೃಷ್ಟಿಯಿಂದ ಹಾಗೂ ಪ್ರತಿಬಂಧಕ ಕ್ರಮಗಳನ್ನು ಸಕಾಲದಲ್ಲಿ ಕೈಗೊಳ್ಳಲು ಸಹ ಭಾರತಕ್ಕೆ ಈ ಮಾಹಿತಿ ಅವಶ್ಯವಾಗಿದೆ ಎಂದು ವಿವರಿಸಿದೆ.

ಭಾರತದಲ್ಲಿ ಕೋವಿಡ್‌-೧೯ರಿಂದಾಗಿ ಸಂಭವಿಸಿರುವ ಸಾವುಗಳ ಸೂಕ್ತ ದಾಖಲೀಕರಣಕ್ಕೆ ಸಂಬಂಧಿಸಿದಂತೆ ತನ್ನ ಮಾರ್ಗದರ್ಶಿ ಸೂತ್ರಗಳ ಕುರಿತು ವಿವರಣೆ ನೀಡಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಪರಿಷತ್‌ (ಐಸಿಎಂಆರ್‌), ಅನಿರ್ಣಾಯಕ ಪರೀಕ್ಷಾ ಫಲಿತಾಂಶಗಳನ್ನು ಹೊಂದಿರುವ, ಆದರೆ ಕೊರೊನಾ ವೈರಸ್‌ ಲಕ್ಷಣಗಳನ್ನು ಹೊಂದಿರುವಂತಹ ಸಾವುಗಳನ್ನು “ಕೋವಿಡ್‌-೧೯ರಿಂದಾಗಿ ಸಂಭವಿಸಿರಬಹುದಾದ ಸಾವುಗಳು” ಎಂದು ದಾಖಲೀಕರಿಸಲಾಗುವುದು ಎಂದು ಹೇಳಿದೆ. ಇನ್ನು, ಕೊರೊನಾ ಲಕ್ಷಣಗಳಿರುವ ಹಾಗೂ ಪರೀಕ್ಷಾ ಫಲಿತಾಂಶಗಳನ್ನು ನಿರೀಕ್ಷಿಸಲಾಗುತ್ತಿರುವ ಸಾವುಗಳನ್ನು ಸಂಶಯಾಸ್ಪದ ಸಾವುಗಳು ಎಂದು ದಾಖಲಿಸಲಾಗುವುದು. ಪರೀಕ್ಷೆ ಋಣಾತ್ಮಕವಾಗಿರುವ ಆದರೆ, ಕೊರೊನಾ ಲಕ್ಷಣಗಳನ್ನು ಹೊಂದಿರುವ ಸಾವಿನ ಪ್ರಕರಣಗಳನ್ನು “ಚಿಕಿತ್ಸೆ ಉದ್ದೇಶದಿಂದ ಸಾಂಕ್ರಾಮಿಕ ಎಂದು ನಿರ್ಣಯಿಸಲಾದ ಕೋವಿಡ್‌-19” ಎಂದು ನಮೂದಿಸಲಾಗುವುದು ಎಂದು ಮಾರ್ಗದರ್ಶಿ ಸೂತ್ರ ಹೇಳಿದೆ. ಚಿಕಿತ್ಸಕ ವಿಧಾನ ಕೂಡಾ ಕಡಿಮೆ ತೀವ್ರತೆಯಿಂದ ಅಧಿಕ ತೀವ್ರತೆಯವರೆಗಿನ ಅಂಶಗಳನ್ನು ಹೊಂದಲಿದೆ. ಸಾವಿನ ಸಾಧ್ಯತೆಯು ಕಾಯಿಲೆಯ ತೀವ್ರತೆಯನ್ನು ಅವಲಂಬಿಸಿದ್ದು, ರೋಗಿಯಲ್ಲಿ ಇರಬಹುದಾದ ಇತರ ರೋಗಗಳು ಹಾಗೂ ರೋಗಿಯ ವಯಸ್ಸಿನೊಂದಿಗೆ ಅದು ಜೋಡಿಸಲ್ಪಟ್ಟಿದೆ.

“ರೋಗದ ಚಿಕಿತ್ಸಕ ವಿಧಾನದ ಇತಿಹಾಸ ಮತ್ತು ಸಾವಿನ ಕಾರಣಗಳ ಗುಣಾತ್ಮಕ ದಾಖಲೆಗಳಿಂದ ಮಾತ್ರ ರೋಗದ ಮಾದರಿಗಳು ಮತ್ತು ಸಾವಿನ ಮಾದರಿಗಳು ನಿಖರವಾಗಿ ಮೂಡಿ ಬರಲು ಸಾಧ್ಯ. ಆದ್ದರಿಂದ, ರೋಗದ ಸಾಂಕ್ರಾಮಿಕತೆ ಮತ್ತು ಸಾವಿನ ಕಣ್ಗಾವಲು ಪ್ರಮುಖವಾಗುತ್ತದೆ. ಸಾರ್ವಜನಿಕರ ಆರೋಗ್ಯದ ಮೇಲೆ ಕೋವಿಡ್‌-೧೯ ಸಾಂಕ್ರಾಮಿಕದ ಪ್ರಭಾವವನ್ನು ಅಳೆಯಲು ಹಾಗೂ ಸಕಾಲಿಕ ನೆರವು ನೀಡುವ ಮೂಲಕ ಸಮುದಾಯಗಳನ್ನು ರಕ್ಷಿಸಲು ಪ್ರತಿಯೊಂದು ರಾಜ್ಯಗಳ ಪ್ರತಿಯೊಂದು ಜಿಲ್ಲೆಗಳಿಂದ ಸದೃಢ ದತ್ತಾಂಶ ಪಡೆಯುವುದು ಅವಶ್ಯಕ. ಅದೇ ಸಮಯದಲ್ಲಿ, ಜನರನ್ನು ಬಾಧಿಸುತ್ತಿರುವ ಇತರ ಆರೋಗ್ಯ ಸಮಸ್ಯೆಗಳ ಮೇಲೆಯೂ ನಿಗಾ ವಹಿಸಬೇಕಾದ ಅವಶ್ಯಕತೆಯಿದೆ. ಆಗ ಮಾತ್ರ ಸಾರ್ವಜನಿಕರ ಅವಶ್ಯಕತೆಗೆ ಅನುಸಾರವಾಗಿ ಆರೋಗ್ಯ ವ್ಯವಸ್ಥೆಯನ್ನು ಸಿದ್ಧಪಡಿಸಬಹುದು” ಎಂದು ಮಾರ್ಗದರ್ಶಿ ಸೂತ್ರ ಹೇಳಿದೆ. ಸಾವು ಸಂಭವಿಸಲು ಕಾರಣವಾದ ಅಂಶಗಳನ್ನು ವೈದ್ಯರು ಅಥವಾ ವೈದ್ಯಕೀಯ ಸೌಲಭ್ಯ ವ್ಯವಸ್ಥೆಯು ದಾಖಲಿಸಲು ಬೇಕಾದ ಅರ್ಜಿಗಳನ್ನು ಸಹ ಅದು ಪಟ್ಟಿ ಮಾಡಿದ್ದು, ಸಾವಿಗೆ ತಕ್ಷಣ ಕಾರಣ, ಸಾವನ್ನು ಉಂಟು ಮಾಡಿದಂತಹ ಹಿಂದಿನ ಕಾರಣಗಳು, ಸಾವಿನ ಹಿಂದಿರುವ ಇತರ ಕಾರಣಗಳು ಮತ್ತು ಯಾವ ರೀತಿ ಸಾವು ಸಂಭವಿಸಿತು ಎಂಬ ಇತರ ವಿವರಗಳನ್ನೂ ಅದು ಒಳಗೊಂಡಿದೆ.

ಕೋವಿಡ್‌-19ರಿಂದಾಗಿ ಸಂಭವಿಸಿರುವ ಬಹುತೇಕ ಸಾವಿನ ಪ್ರಕರಣಗಳಲ್ಲಿ ನ್ಯುಮೋನಿಯಾದಿಂದ ಸಾವು ಸಂಭವಿಸಿದ್ದು, ಇದು ಉಂಟಾಗಲು ಕೋವಿಡ್-‌೧೯ ಕಾರಣವಾಗಿರುವ ಸಾಧ್ಯತೆಗಳಿವೆ. ಇದರ ಜೊತೆಗೆ ರೋಗಿಗಳಲ್ಲಿ ಆಸ್ತಮಾ, ತೀವ್ರ ಉಸಿರಾಟದ ಸಮಸ್ಯೆ, ರಕ್ತಹೀನತೆಯ ಹೃದಯ ಕಾಯಿಲೆ, ಕ್ಯಾನ್ಸರ್‌ ಮತ್ತು ಮಧುಮೇಹದಂತಹ ಇತರ ಕಾಯಿಲೆಗಳೂ ಮಂಚಿತವಾಗಿಯೇ ಇದ್ದಿರಬಹುದು. ಈ ಕಾರಣಗಳಿಂದಾಗಿ ಕೋವಿಡ್‌-೧೯ ಸೋಂಕು ದೃಢಪಟ್ಟ ರೋಗಿಯಲ್ಲಿ ಉಸಿರಾಟ ವ್ಯವಸ್ಥೆಯ ಸೋಂಕಿನ ಅಪಾಯಗಳು ಹೆಚ್ಚಾಗುತ್ತವೆ ಹಾಗೂ ಆರೋಗ್ಯ ಪರಿಸ್ಥಿತಿಯು ಜಟಿಲವಾಗಲು ಕಾರಣವಾಗುವ ಮೂಲಕ ರೋಗ ತೀವ್ರವಾಗುತ್ತದೆ. “ಈ ಕಾರಣಗಳನ್ನು ಸಾವಿನ ಕಾರಣಗಳೆಂದು ಪರಿಗಣಿಸಲಾಗುವುದಿಲ್ಲ. ಏಕೆಂದರೆ, ಕೋವಿಡ್‌-19ರಿಂದಾಗಿ ಸಾವು ಸಂಭವಿಸಲು ಇವು ಕಾರಣಗಳಾಗಿರುವುದಿಲ್ಲ. ಅಲ್ಲದೇ, ರೋಗಿಯು ಇತರ ಆರೋಗ್ಯ ಸಮಸ್ಯೆಗಳನ್ನೂ ಹೊಂದಿರುವ ಸಾಧ್ಯತೆಗಳಿದ್ದು, ಆತನ ಸಾವಿಗೆ ಕಾರಣವಾದ ಅಂಶಗಳನ್ನಷ್ಟೇ ದಾಖಲಿಸಬೇಕು,” ಎಂದು ಮಾರ್ಗದರ್ಶಿ ದಾಖಲೆಯಲ್ಲಿ ಹೇಳಲಾಗಿದೆ.

ಕೋವಿಡ್-‌೧೯ರಿಂದ ದೇಶಾದ್ಯಂತ ಸಂಭವಿಸಿದ ಸಾವಿನ ಸಂಖ್ಯೆ ಸೋಮವಾರದ ಹೊತ್ತಿಗೆ ೨,೨೦೬ಕ್ಕೆ ಏರಿದ್ದು, ಸೋಂಕಿತರ ಸಂಖ್ಯೆ ೬೭,೧೫೨ಕ್ಕೆ ಏರಿಕೆಯಾಗಿತ್ತು. ಕಳೆದ ೨೪ ಗಂಟೆಗಳಲ್ಲಿ ೯೭ ಸಾವುಗಳು ಹಾಗೂ ೪,೨೧೩ ಹೊಸ ಸೋಂಕಿತರು ಪತ್ತೆಯಾಗಿದ್ದಾರೆ ಎನ್ನುತ್ತದೆ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ. ಇನ್ನು ಮುಂದೆ ಸಾವಿನ ಕಾರಣಗಳನ್ನು ಐಸಿಎಂಆರ್‌-ಎನ್‌ಸಿಡಿಐಆರ್‌ ರೂಪಿಸಿರುವ ಇ-ಪ್ರಾಣಹಾನಿ (ಇ-ಮಾರ್)‌ ತಂತ್ರಾಂಶದಲ್ಲಿ ದಾಖಲಿಸುವಂತೆ ಆರೋಗ್ಯ ಸಂಶೋಧನಾ ಸಂಸ್ಥೆ ಸ್ಪಷ್ಟಪಡಿಸಿದೆ. ಭಾರತದ ರಿಜಿಸ್ಟ್ರಾರ್‌ ಜನರಲ್‌ ಅವರು ನಿಗದಿಪಡಿಸಿರುವ ರಾಷ್ಟ್ರೀಯ ನಿಗದಿತ ಮಾನದಂಡಗಳಿಗೆ ಅನುಸಾರವಾಗಿ ಸಾವಿನ ಕಾರಣಗಳನ್ನು ದಾಖಲಿಸಲು ಐಸಿಎಂಆರ್‌-ಎನ್‌ಸಿಡಿಐಆರ್‌ ರೂಪಿಸಿರುವ ಇ-ಪ್ರಾಣಹಾನಿ (ಇ-ಮಾರ್)‌ ತಂತ್ರಾಂಶ ಆಪ್‌ ನೆರವಾಗುತ್ತದೆ. ಆಸ್ಪತ್ರೆಗಳು ಹಾಗೂ ಜಿಲ್ಲಾ ಸ್ಥಳೀಯ ನೋಂದಣಿ ಕಚೇರಿಗಳು (ಮನೆಯಲ್ಲಿ ಸಂಭವಿಸುವ ಸಾವಿನ ದಾಖಲೆಗಳನ್ನಿಡುವ) ಈ ತಂತ್ರಾಂಶವನ್ನು ಅನುಷ್ಠಾನಗೊಳಿಸಿಕೊಳ್ಳಬಹುದಾಗಿದೆ. ಅಧಿಕೃತ ಲಾಗಿನ್‌ ಮಾಹಿತಿಗಾಗಿ ಇಂತಹ ಸಂಸ್ಥೆಗಳು ಐಸಿಎಂಆರ್‌-ಎನ್‌ಸಿಡಿಐಆರ್‌ ಅಥವಾ ರಾಜ್ಯ ಪ್ರಾಧಿಕಾರದ ಜೊತೆ ನೋಂದಾಯಿಸಿಕೊಳ್ಳಬೇಕು ಎಂದು ಸಹ ಮಾರ್ಗದರ್ಶಿ ಸೂತ್ರದ ದಾಖಲೆ ಹೇಳಿದೆ.

ABOUT THE AUTHOR

...view details