ಕರ್ನಾಟಕ

karnataka

ETV Bharat / bharat

ಕೊರೊನಾ ಹೊಡೆತಕ್ಕೆ ತತ್ತರಿಸಿ ಮತ್ತೆದ್ದು ನಿಲ್ಲಲು ಮುಂದಾಗ್ತಿದೆ ಚೀನಾ; ಸಾರಿಗೆ ಸಂಚಾರ ಆರಂಭ - ಕೊರೊನಾ ವೈರಸ್​ ಭೀತಿ

ರಕ್ಕಸ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್​ನ ಮಾರುಕಟ್ಟೆಯೊಂದರಲ್ಲಿ. ಪ್ರಾರಂಭದಲ್ಲಿ ಆ ಪ್ರಾಂತ್ಯದಲ್ಲಿದ್ದ ವೈರಸ್​​​​ ಮೆಲ್ಲಗೆ ಚೀನಾವನ್ನು, ನಂತರ ಪಕ್ಕದ ರಾಷ್ಟ್ರಗಳು, ಈಗ ಇಡೀ ಜಗತನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದೆ. ಸದ್ಯ ಕೊರೊನಾ ಬಿಗಿಮುಷ್ಠಿ ಸಡಿಲಿಸುತ್ತಿದ್ದು ಚೀನಾ ಸಹಜ ಪರಿಸ್ಥಿತಿಗೆ ಮರಳಲು ಸಜ್ಜುಗೊಳ್ಳುತ್ತಿದೆ.

Hubei returns to life after lock down eased
ಸಾರಿಗೆ ಸಂಚಾರ ಆರಂಭ

By

Published : Mar 26, 2020, 10:37 AM IST

ಹುಬೈ (ಚೀನಾ): ಜಗತ್ತನ್ನು ಇನ್ನಿಲ್ಲದಂತೆ ಕಾಡುತ್ತಿರುವ ಮಹಾಮಾರಿ ಸ್ವಲ್ಪ ನಿಯಂತ್ರಣಕ್ಕೆ ಬರುತ್ತಿರುವ ಪರಿಣಾಮ ಕೊವಿಡ್-19​ ಜನ್ಮತಾಣವಾದ ಚೀನಾದಲ್ಲಿ ವುಹಾನ್​​ ಹೊರತುಪಡಿಸಿ ಉಳಿದೆಲ್ಲಾ ಪ್ರಾಂತ್ಯಗಳಲ್ಲಿ ಮಾರ್ಚ್​ 25ರಿಂದ ಎಲ್ಲಾ ರೀತಿಯ ಸಾರಿಗೆ ಸಂಚಾರ ಸೇವೆ ಆರಂಭಗೊಂಡಿದೆ. ವೈರಸ್ ವಿರುದ್ಧದ ಯುದ್ಧದಲ್ಲಿ ನಗರವು ಗಮನಾರ್ಹ ಫಲಿತಾಂಶ ಸಾಧಿಸಿದ ಕಾರಣ ಸಾರ್ವಜನಿಕರಿಗಾಗಿ ಸಾರಿಗೆ ಸೇವೆ ದೊರಕಿಸಿಕೊಡಲು ಅಲ್ಲಿನ ಸರ್ಕಾರ ಮುಂದಾಗಿದೆ.

ಸಾರಿಗೆ ಸಂಚಾರ ಆರಂಭ

ರಕ್ಕಸ ವೈರಸ್ ಮೊದಲು ಕಾಣಿಸಿಕೊಂಡಿದ್ದು ಚೀನಾದ ವುಹಾನ್​ನ ಮಾರುಕಟ್ಟೆಯೊಂದರಲ್ಲಿ. ಪ್ರಾರಂಭದಲ್ಲಿ ಆ ಪ್ರಾಂತ್ಯದಲ್ಲಿದ್ದ ವೈರಸ್​​​​ ಮೆಲ್ಲಗೆ ಚೀನಾವನ್ನು, ನಂತರ ಪಕ್ಕದ ರಾಷ್ಟ್ರಗಳು, ಈಗ ಇಡೀ ಜಗತನ್ನೇ ತನ್ನ ಕಪಿಮುಷ್ಠಿಗೆ ತೆಗೆದುಕೊಂಡಿದೆ. ಸದ್ಯ ಕೊರೊನಾ ಬಿಗಿಮುಷ್ಠಿ ಸಡಿಲಿಸುತ್ತಿದ್ದು ಚೀನಾ ಸಹಜ ಪರಿಸ್ಥಿತಿಗೆ ಮರಳಲು ಸಜ್ಜುಗೊಳ್ಳುತ್ತಿದೆ.

ಕಿಲ್ಲರ್​ ವೈರಸ್‌ ​ಕೊಲ್ಲಲು ಇಲ್ಲಿನ ಸರ್ಕಾರ ಅತ್ಯಾಧುನಿಕ ತಂತ್ರಜ್ಞಾನಗಳನ್ನು ಬಳಸಿಕೊಂಡಿದೆ. ಹೀಗಾಗಿ ವೈರಾಣು ನಿಯಂತ್ರಣಕ್ಕೆ ಬಂದಿದೆ ಎನ್ನಲಾಗಿದೆ. ಆದರೆ, ಚೀನಾ, ಸಿಂಗಾಪುರ, ದಕ್ಷಿಣ ಕೊರಿಯಾ ಹೊರತುಪಡಿಸಿ ಉಳಿದ ದೇಶಗಳು ಕೊರೊನಾ ವಿರುದ್ಧ ಕ್ಷಣಕ್ಷಣಕ್ಕೂ ಹೋರಾಡುತ್ತಿವೆ.

ಇದನ್ನೂ ಓದಿ...ಕೊರೊನಾ ವೈರಸ್​​​ ನಿಯಂತ್ರಣಕ್ಕೆ ಚೀನಾ, ದಕ್ಷಿಣ ಕೊರಿಯಾ ಮಾಡಿದ ಉಪಾಯಗಳೇನು? ಓದಿ...

ಜನರ ಕೆಲಸ ಮತ್ತು ಉತ್ಪಾದನೆ ಸುಗಮವಾಗಿ ಚೇತರಿಕೆ ಕಾಣಲು ಈ ನಿರ್ಧಾರಕ್ಕೆ ಚೀನಾ ಬಂದಿದೆ. ವುಹಾನ್​ ಹೊರತುಪಡಿಸಿ, ರೈಲ್ವೆ, ಜಲಮಾರ್ಗ ಮತ್ತು ದೂರದ-ಬಸ್ ಸೇವೆಗಳ ಜೊತೆಗೆ ಹೆದ್ದಾರಿಗಳನ್ನು ಕ್ರಮಬದ್ಧವಾಗಿ ಪುನಃ ಪ್ರಾರಂಭಿಸಲಾಗಿದೆ ಎಂದು ಸಾರಿಗೆ ಇಲಾಖೆಯ ಉಪನಿರ್ದೇಶಕ ವಾಂಗ್ ಬೆಂಜು ಹೇಳಿದರು.

ಕಡಿಮೆ ಅಪಾಯದ ಪ್ರದೇಶದಲ್ಲೂ ಸಹ ಸೇವೆ, ಟ್ಯಾಕ್ಸಿ, ಬಸ್​, ಆನ್​ಲೈನ್​​ ಬೈಕ್​ಗಳು ಮತ್ತು ದೋಣಿಗಳು ಸೇರಿದಂತೆ ನಗರ ಸಾರಿಗೆ ಸೇವೆ ಆರಂಭವಾಗಿದೆ. ಕೊರೊನಾ ವೈರಸ್​ನಿಂದ ಚೀನಾದಲ್ಲಿ ಹೆಚ್ಚು ಮಂದಿಯನ್ನು ಬಲಿ ತೆಗೆದುಕೊಂಡ ನಗರವಾದ ವುಹಾನ್​ನಲ್ಲಿ ಏಪ್ರಿಲ್​​ 8ರವರೆಗೂ ವಾಣಿಜ್ಯ ಸಂಚಾರ, ಅಂತರರಾಷ್ಟ್ರೀಯ ವಿಮಾನಗಳು, ಬೀಜಿಂಗ್​ಗೆ ಮತ್ತು ಹೊರಗಿನ ವಿಮಾನಗಳ ಹಾರಾಟಕ್ಕೆ ತಡೆ ನೀಡಲಾಗಿದೆ. ನಾಗರಿಕ ವಿಮಾನಯಾನಕ್ಕೆ ಆದಷ್ಟು ಬೇಗ ಅವಕಾಶ ನೀಡಬೇಕು ಎಂದು ಸ್ಥಳೀಯ ಅಧಿಕಾರಿಗಳು ಆಡಳಿತ ಮಂಡಳಿಗೆ ಅರ್ಜಿ ಸಲ್ಲಿಸಿದ್ದಾರೆ.

ವುಹಾನ್​​ನಲ್ಲಿ ಶನಿವಾರದಿಂದ ಸಾರ್ವಜನಿಕ ಬಸ್​​ ಸೇವೆ, 17 ರೈಲ್ವೆ ನಿಲ್ದಾಣಗಳಲ್ಲಿ ರೈಲು ಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಏಪ್ರಿಲ್​ 8ರ ಬಳಿಕ ವುಹಾನ್​ನಿಂದ ಹೊರಸಂಚಾರಕ್ಕೆ ಅವಕಾಶ ನೀಡಲಾಗುತ್ತದೆ. ಕೆಲಸಗಳಿಗೆ ಹೋಗುವ ಕಾರ್ಮಿಕರು ಹಸಿರು ಸಂಕೇತ ತೋರುವ ಚಿಹ್ನೆಗಳನ್ನು ಹೊಂದಿರಬೇಕು. ಅವರಲ್ಲಿ ಯಾವುದೇ ಸೋಂಕು ಇಲ್ಲ ಮತ್ತು ಶಂಕಿತ ಕೊರೊನಾ ರೋಗಿಗಳೊಂದಿಗೆ ಸಂಪರ್ಕ ಹೊಂದಿರಲಿಲ್ಲ ಎಂಬುದನ್ನು ಈ ಚಿಹ್ನೆ ತಿಳಿಸುತ್ತದೆ.

ಸಾರ್ವಜನಿಕರು ಬಸ್​, ರೈಲು ಹತ್ತುವಾಗ ತಪಾಸಣೆ ಮಾಡಲಾಗುತ್ತದೆ. ಡಿಪೋದಿಂದ ತೆರಳುವ ಮುನ್ನ ಬಸ್​​ಗೆ ರಾಸಾಯನಿಕ ಸಿಂಪಡಣೆ ಮಾಡಲಾಗುತ್ತದೆ. ಸದ್ಯದ ಮಟ್ಟಿಗೆ ವಾಹನಗಳ ಸಂಚಾರ ವಿರಳವಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚಾಗುವ ಸಾಧ್ಯತೆ ಹೆಚ್ಚಿದೆ.

ವಾಹನ ಸಂಚಾರ, ಕೈಗಾರಿಕೆ ಸೇರಿದಂತೆ ಎಲ್ಲಾ ಕ್ಷೇತ್ರಗಳಿಗೂ ನಿರ್ಬಂಧ ಹೇರಿದ್ದ ಪರಿಣಾಮ, ಆರ್ಥಿಕ ಕ್ಷೇತ್ರ ಕೈಗಟುಕದ ರೀತಿ ಪಾತಾಳಕ್ಕೆ ಕುಸಿದುಹೋಗಿದೆ. ಈಗ ಅದೆಲ್ಲವನ್ನೂ ಹದ್ದುಬಸ್ತಿಗೆ ತರಲು ಚೀನಾ ನಾನಾ ಪ್ರಯತ್ನಗಳನ್ನು ನಡೆಸುತ್ತಿದೆ. ವಿದೇಶದಿಂದ ಬಂದ ಪ್ರಯಾಣಿಕರನ್ನು ಹೋಂ ಐಸೋಲೇಷನ್​ಗಳಲ್ಲಿ ಇರಿಸಲಾಗುತ್ತಿದೆ.

ಕೊರೊನಾ ವೈರಸ್​ ವ್ಯಾಪಕವಾಗಿ ಹರಡುವುದು ಆರಂಭವಾಗುತ್ತಲೇ ಹುಬೈನಲ್ಲಿ ಜ.23ರಿಂದ ಸಂಚಾರ ನಿರ್ಬಂಧ ವಿಧಿಸಿದೆ. ಸೋಂಕು ನಿಯಂತ್ರಿಸಲು ಜನರು ಮನೆಯಲ್ಲೇ ಇರುವಂತೆ ತಿಳಿಸಿ ಬಸ್​​, ಸುರಂಗ ಮಾರ್ಗ, ವಿಮಾನಗಳು, ರೈಲ್ವೆ ಮತ್ತು ಹೆದ್ದಾರಿ ಸೇವೆಗಳನ್ನು ಸ್ಥಗಿತಗೊಳಿಸಲಾಗಿತ್ತು.

ಯಕಶ್ಚಿತ್​ ವೈರಸ್​ ವಿರುದ್ಧ ಹೋರಾಡಲು ತಂತ್ರಜ್ಞಾನ, ವೈದ್ಯಕೀಯ ತಂಡಗಳು ಹಾಗೂ ಎಲ್ಲಾ ರೀತಿಯ ಶಕ್ತಿಯನ್ನು ಬಳಸಿಕೊಳ್ಳುತ್ತಿದೆ. ಕೊರೊನಾ ವೈರಸ್ ಅನ್ನು ದೇಶದಿಂದ ಹೊರಹಾಕಲು ಚೀನಾದಲ್ಲಿ ತಜ್ಞರು ಮತ್ತು ವೈದ್ಯರು ಗಡಿಯಾರದ ಮುಳ್ಳಿನ ಜೊತೆ ಓಡುತ್ತಿದ್ದಾರೆ. ಅಷ್ಟರ ಮಟ್ಟಿಗೆ ವೇಗವಾಗಿ ಕಾರ್ಯನಿರ್ವಸುತ್ತಿದ್ದಾರೆ. ಅದಕ್ಕಾಗಿ ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ (ಎಐ), ರೋಬೋಟ್, ಅಪ್ಲಿಕೇಶನ್‌ಗಳು, ಡ್ರೋನ್‌, ಹೊಸ ತಂತ್ರಜ್ಞಾನ ಮತ್ತು ಮೊಬೈಲ್ ಇಂಟರ್​​ನೆಟ್​​​ ಸೇವೆಗಳ ತಂತ್ರಜ್ಞಾನ ಬಳಸುತ್ತಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ರಾಕ್ಷಸ ಕೊರೊನಾ ಆರ್ಭಟಕ್ಕೆ ವಿಶ್ವಾದ್ಯಂತ 21,293 ಮಂದಿ ಬಲಿಯಾಗಿದ್ದಾರೆ. ಇನ್ನೂ ಅದೆಷ್ಟೋ ಜೀವಗಳು ಸಾವು-ಬದುಕಿನ ಮಧ್ಯೆ ನರಳುತ್ತಿವೆ. ಸುಮಾರು 4,68,523 ಮಂದಿಗೆ ಸೋಂಕು ಕಾಣಿಸಿಕೊಂಡಿದ್ದು, ಅದರಲ್ಲಿ 1,13,780 ಮಂದಿ ಚೇತರಿಸಿಕೊಂಡಿದ್ದಾರೆ.

ABOUT THE AUTHOR

...view details