ನವದೆಹಲಿ: ಮೇ 22ರಂದು ಪ್ರಧಾನಿ ನರೇಂದ್ರ ಮೋದಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಅಂಫಾನ್ ಚಂಡಮಾರುತವನ್ನು ನಿರ್ವಹಿಸಿದ ಕಾರ್ಯ ವೈಖರಿಗೆ ಶ್ಲಾಘಿಸಿದ್ದರು. ಇದರ ಬೆನ್ನಲ್ಲೇ ರಾಜ್ಯ ಬಿಜೆಪಿ ನಾಯಕರು ಇದಕ್ಕೆ ವಿರುದ್ಧವಾದ ಹೇಳಿಕೆ ನೀಡಿದ್ದಾರೆ.
ಬಿಜೆಪಿಯ ದಿಲೀಪ್ ಘೋಸ್ ಮತ್ತು ರಾಜ್ಯ ಉಸ್ತುವಾರಿ ಕೈಲಾಶ್ ವಿಜಯವರ್ಗಿಯಾ ನೇತೃತ್ವದ ಬಿಜೆಪಿ ಮುಖಂಡರು ಮಮತಾ ಬ್ಯಾನರ್ಜಿ ವಿರುದ್ಧ ವಾಗ್ದಾಳಿ ನಡೆಸಿದರು. ತೃಣ ಮೂಲ ಕಾಂಗ್ರೆಸ್ ಎಂತಹ ದುರಂತ ಸಂದರ್ಭದಲ್ಲಿಯೂ ರಾಜಕೀಯ ಮಾಡುತ್ತದೆಯೇ ಹೊರತು ಜನರ ಶ್ರೇಯೋಭಿವೃದ್ಧಿಗೆ ಶ್ರಮಿಸುವುದಿಲ್ಲ ಎಂದಿದ್ದಾರೆ.
ಅಂಫಾನ್ ಚಂಡಮಾರುತದಿಂದ ಹಾನಿಗೊಳಗಾದ ಪಶ್ಚಿಮ ಬಂಗಾಳದ ವೈಮಾನಿಕ ಸಮೀಕ್ಷೆ ನಡೆಸಿದ ನಂತರ ಪ್ರಧಾನಿ ಮೋದಿ, ದೀದಿ ಸರ್ಕಾರದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಬಂಗಾಳವು ಎರಡು ಯುದ್ಧಗಳ ವಿರುದ್ಧ ಹೋರಾಡುತ್ತಿದೆ. ಒಂದು ಕೊರೊನಾ, ಇನ್ನೊಂದು ಚಂಡಮಾರುತ. ಮಮತಾ ಅವರ ನಾಯಕತ್ವದಲ್ಲಿ ರಾಜ್ಯವು ಈ ಎರಡೂ ಯುದ್ಧವನ್ನು ಸಮರ್ಥವಾಗಿ ಎದುರಿಸುತ್ತಿದೆ ಎಂದು ಶ್ಲಾಘಿಸಿದ್ದರು.
ರಾಜ್ಯ ನಾಯಕತ್ವದ ಆಕ್ರಮಣಕಾರಿ ನಿಲುವನ್ನು ವಿವರಿಸಿದ ಬಿಜೆಪಿಯ ನಾಯಕರು, ನಾವು ಬಂಗಾಳದ ಜನರ ಕಲ್ಯಾಣಕ್ಕಾಗಿ ಕೆಲಸ ಮಾಡಲು ಪ್ರಯತ್ನಿಸುತ್ತಿದ್ದೇವೆ ಮತ್ತು ಎಂತಹ ಕಠಿಣ ಸಂದರ್ಭದಲ್ಲಿಯೂ ಸಹ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲು ಸಿದ್ಧರಿದ್ದೇವೆ. ಆದರೆ, ಮಮತಾ ಸರ್ಕಾರವು ಕೊರೊನಾ ವೈರಸ್ ಮತ್ತು ಅಂಫಾನ್ ಚಂಡಮಾರುತದಂಥಹ ಸನ್ನಿವೇಶಗಳು ಎದುರಾಗಿದ್ದರೂ ಸಹ ಜನರ ಕಷ್ಟಗಳಿಗೆ ಸ್ಪಂದಿಸದೆ ತಮ್ಮ ಪಕ್ಷ ಹಾಗೂ ಸರ್ಕಾರದ ಬಗ್ಗೆಯೇ ಚಿಂತಿಸುತ್ತಿದ್ದಾರೆ ಎಂದು ಹರಿಹಾಯ್ದಿದ್ದಾರೆ.
ಬಿಜೆಪಿಯ ಹಿರಿಯ ನಾಯಕರೋರ್ವ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ರಾಜ್ಯದಲ್ಲಿ ಉಂಟಾದ ವಿಪತ್ತುಗಳ ಸಂದರ್ಭಗಳನ್ನು ನಿಭಾಯಿಸುವ ಬಗ್ಗೆ ಮಮತಾ ಅವರನ್ನು ಹೊಗಳಿದ್ದು, ನಾವು ಜವಾಬ್ದಾರಿಯುತ ಪ್ರತಿಪಕ್ಷವಾಗಿ ಕಾರ್ಯನಿರ್ವಹಿಸುವುದನ್ನು ನಿಲ್ಲಿಸುತ್ತೇವೆ ಎಂದಲ್ಲ. ಮಮತಾ ಸರ್ಕಾರದ ವೈಫಲ್ಯಗಳನ್ನು ನಾವು ಎತ್ತಿ ತೋರಿಸುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ.