ಪುಣೆ, ಮಹಾರಾಷ್ಟ್ರ:ಸಿದ್ಧಿ ವಿನಾಯಕ ದೇವಾಲಯದ ನಂತರ ದಗ್ಡುಶೇಠ್ ಹಲ್ವಾಯಿ ಗಣಪತಿ ಮಂದಿರವು ಮಹಾರಾಷ್ಟ್ರದ ಎರಡನೇ ಅತ್ಯಂತ ಪ್ರಸಿದ್ಧ ಗಣೇಶ ದೇವಾಲಯ ಎಂಬ ಹೆಗ್ಗಳಿಕೆ ಹೊಂದಿದೆ. ಇದು ಪುಣೆಯಲ್ಲಿನ ಗಣೇಶ ದೇವಾಲಯವಾಗಿದ್ದು, ಇಲ್ಲಿ 7.5 ಅಡಿ ಎತ್ತರ ಮತ್ತು 4 ಅಡಿ ಅಗಲದ ಗಣಪತಿ ವಿಗ್ರಹವನ್ನು ಅಮೂಲ್ಯವಾದ ಚಿನ್ನಾಭರಣಗಳಿಂದ ಅಲಂಕರಿಸಲಾಗಿದೆ.
ಸಿಹಿತಿಂಡಿಗಳನ್ನು ಮಾರಾಟ ಮಾಡುತ್ತಿದ್ದ ದಗ್ಡುಶೇಠ್ ಗಾಡ್ವೆ ಎಂಬ ವರ್ತಕ ಆ ಕಾಲದ ಪ್ರಸಿದ್ಧ ಮಿಠಾಯಿಗಾರರಾಗಿದ್ದರು. ಅವರ ಮಗ ಸಾಂಕ್ರಾಮಿಕ ರೋಗದಿಂದ ಸಾವನ್ನಪ್ಪುತ್ತಾನೆ. ಇದೇ ದುಃಖದಲ್ಲಿ ಈ ಶೋಕವನ್ನ ಮರೆಯಲು ಅವರು, ಗಣೇಶ ದೇವಾಲಯವನ್ನು ನಿರ್ಮಿಸಿದರೆಂದು ಹೇಳಲಾಗುತ್ತದೆ. ಗಣೇಶ ಚತುರ್ಥಿಯಂದು ಈ ದೇವಾಲಯವನ್ನು ಅತ್ಯಂತ ಸುಂದರವಾಗಿ ಹೂವು ಮತ್ತು ದೀಪಗಳಿಂದ ಅಲಂಕಾರಗೊಳಿಸಲಾಗುತ್ತದೆ. ಈ ಗಣೇಶ ದೇವಾಲಯವು ಚಿನ್ನದ ವಿಗ್ರಹದಿಂದ ಅತ್ಯಂತ ಜನಪ್ರಿಯವಾಗಿದೆ.
1894 ರಲ್ಲಿ ಲೋಕಮಾನ್ಯ ಬಾಲ ಗಂಗಾಧರ್ ತಿಲಕ್ ಅವರು ಸಾರ್ವಜನಿಕ ಗಣೇಶೋತ್ಸವವನ್ನು ಪ್ರಾರಂಭಿಸಿದರು. ಬಳಿಕ 1896 ರಲ್ಲಿ ಶ್ರೀಮಂತ ದಗ್ಡುಶೇಠ್ ಹಲ್ವಾಯಿ ಗಣಪತಿಯ ಮತ್ತೊಂದು ವಿಗ್ರಹವನ್ನು ಸ್ಥಾಪಿಸಲಾಯಿತು. ಅಂದಿನಿಂದ ಅದರ ಆಚರಣೆಯನ್ನು ಪ್ರಾರಂಭಿಸಲಾಯಿತು. ಅದೇ ವೇಳೆ ದಗ್ಡುಶೇಠ್ ಗಾಡ್ವೆ ಅವರು ನಿಧನರಾದರು. ಆದರೆ ಅವರು ಪ್ರಾರಂಭಿಸಿದ ಗಣೇಶೋತ್ಸವದ ಸಂಪ್ರದಾಯವನ್ನು, ಆ ಪ್ರದೇಶದ ನಾಗರಿಕರು ಮತ್ತು ಕಾರ್ಯಕರ್ತರು ಮುಂದುವರೆಸಿಕೊಂಡೇ ಬಂದಿದ್ದಾರೆ.