ನವದೆಹಲಿ: ಎಲ್ಲಾ ತಂಬಾಕು ಉತ್ಪನ್ನಗಳ ಪ್ಯಾಕೆಟ್‌ಗಳ ಮೇಲೆ ಆರೋಗ್ಯ ಸಂಬಂಧ ಎಚ್ಚರಿಕೆಯ ಹೊಸ ಚಿತ್ರವನ್ನು ಮುದ್ರಿಸಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯ ಸೂಚಿಸಿದೆ.
ಈ ವರ್ಷ ಸೆಪ್ಟೆಂಬರ್ 1 ರ ನಂತರ ಮೊದಲು ಸೂಚಿಸಿದ ಚಿತ್ರವನ್ನು ಮುದ್ರಿಸಬೇಕು. ಹಾಗೆಯೇ, ಮುಂದಿನ ವರ್ಷದ ಸೆಪ್ಟೆಂಬರ್ 1 ರ ನಂತರ ಸೂಚಿಸಿದ ಎರಡನೇ ಚಿತ್ರವನ್ನು ಮುದ್ರಿಸಬೇಕು ಎಂದು ತಿಳಿಸಿದೆ.
ಸಿಗರೇಟ್ ಅಥವಾ ಯಾವುದೇ ತಂಬಾಕು ಉತ್ಪನ್ನಗಳ ಮೇಲೆ ಹಾಗೂ ಇಂಥಹ ಎಲ್ಲಾ ವಿಧದ ಪ್ಯಾಕೆಟ್‌ಗಳ ಮೇಲೆ ಆರೋಗ್ಯ ಇಲಾಖೆ ಸೂಚಿಸಿದಂತೆ ಆರೋಗ್ಯ ಎಚ್ಚರಿಕೆಯ ಸಂದೇಶ ನೀಡುವ ಚಿತ್ರವನ್ನು ಮುದ್ರಿಸಬೇಕು. ಇದನ್ನು ಉಲ್ಲಂಘನೆ ಮಾಡಿದರೆ ಸೆಕ್ಷನ್ 20 ರ ಪ್ರಕಾರ ಜೈಲು ಶಿಕ್ಷೆ ಅಥವಾ ದಂಡದೊಂದಿಗೆ ಶಿಕ್ಷಿಸಬಹುದಾದ ಅಪರಾಧವಾಗಿದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ.
ತಜ್ಞರ ಪ್ರಕಾರ, ತಂಬಾಕು ಸೇವನೆಯಿಂದಾಗಿ ಭಾರತದಲ್ಲಿ ಪ್ರತಿವರ್ಷ ಸುಮಾರು 12 ಲಕ್ಷ ಸಾವುಗಳು ಸಂಭವಿಸುತ್ತವೆ. ಅಲ್ಲದೆ, 50 ಪ್ರತಿಶತ ಕ್ಯಾನ್ಸರ್ಗೆ ಹಾಗೂ 90 ಪ್ರತಿಶತದಷ್ಟು ಬಾಯಿ ಕ್ಯಾನ್ಸರ್ಗೆ ಈ ತಂಬಾಕು ಕಾರಣವಾಗಿದೆ.