ನವದೆಹಲಿ:ತೆರಿಗೆ ಇಲಾಖೆ ರಾಷ್ಟ್ರ ರಾಜಧಾನಿಯ ಹಲವೆಡೆ ಹಾಗೂ ದೆಹಲಿ ವಿಮಾನ ನಿಲ್ದಾಣದಲ್ಲಿ ಕೆಲವು ವರ್ಷಗಳಿಂದ ಮುಟ್ಟುಗೋಲು ಹಾಕಿಕೊಂಡಿದ್ದ ಪುರಾತನ ಮತ್ತು ಮಧ್ಯಕಾಲೀನ ಅವಧಿಯ ಪ್ರಾಚೀನ ಕಲಾಕೃತಿಗಳು ಹಾಗೂ ನಾಣ್ಯಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಹಸ್ತಾಂತರಿಸಿದರು.
63.90 ಕೋಟಿ ರೂಪಾಯಿ ಮೌಲ್ಯದ ಐತಿಹಾಸಿಕ ವಸ್ತುಗಳ ಹಸ್ತಾಂತರ - ತೆರಿಗೆ ಇಲಾಖೆಯ ಕಾರ್ಯಾಚರಣೆ
ಬರೋಬ್ಬರಿ 63.90 ಕೋಟಿ ರೂಪಾಯಿ ಮೌಲ್ಯದ ಐತಿಹಾಸಿಕ ವಸ್ತುಗಳನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಅವರಿಗೆ ಹಸ್ತಾಂತರಿಸಿದರು.
ನಾರ್ಥ್ ಬ್ಲಾಕ್ನಲ್ಲಿ ನಡೆದ ಸಮಾರಂಭದಲ್ಲಿ ಈ ಅಪೂರ್ವ ವಸ್ತುಗಳನ್ನು ಹಸ್ತಾಂತರ ಮಾಡಲಾಗಿದ್ದು, ಕ್ರಿ.ಶ 1206 ರಿಂದ 1720 ರವರೆಗಿನ ದೆಹಲಿ ಸುಲ್ತಾನರು ಮತ್ತು ಮೊಘಲ್ ಯುಗಕ್ಕೆ ಸೇರಿದ 40,282 ನಾಣ್ಯಗಳು, ಕುಶಾನ, ಗುಪ್ತಾ, ಪ್ರತಿಹಾರ್, ಚೋಳರು, ರಜಪೂತರು, ಮೊಘಲರು, ಮರಾಠರು ಕಾಲದ ನಾಣ್ಯಗಳು ಹಾಗೂ ಬ್ರಿಟಿಷ್, ಫ್ರೆಂಚ್, ಆಸ್ಟ್ರೇಲಿಯಾದ ನಾಣ್ಯಗಳನ್ನು ಹಸ್ತಾಂತರ ಮಾಡಲಾಗಿದೆ.
ಮುಟ್ಟುಗೋಲು ಹಾಕಿಕೊಳ್ಳಲಾದ ವಸ್ತುಗಳಲ್ಲಿ 18 ಪ್ರಾಚೀನ ಮುದ್ರೆ,. ಧಾರ್ಮಿಕ ಲಾಂಛನ ಮತ್ತು ರಾಜಮನೆತನದ ಮಹಿಳೆಯರು ಧರಿಸುತ್ತಿದ್ದ 1 ಬೆಳ್ಳಿಯ ಡಾಬೂ ಸೇರಿದೆ. ಈ ಎಲ್ಲಾ ಐತಿಹಾಸಿಕ ವಸ್ತುಗಳ ಮೌಲ್ಯ 63.90 ಕೋಟಿ ರೂಗಳು ಎಂದು ಅಂದಾಜಿಸಲಾಗಿದೆ.