ಕೃಷ್ಣಾ (ಆಂಧ್ರಪ್ರದೇಶ): ಕುಡಿದ ನಶೆಯಲ್ಲಿ ಪಾಪಿ ತಂದೆಯೋರ್ವ ತನ್ನ ಮೂವರು ಮಕ್ಕಳನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬಿಟ್ಟು ಬಂದಿದ್ದನು. ಅದರಲ್ಲಿ ಓರ್ವ ಬಾಲಕಿ ಬರೋಬ್ಬರಿ 10 ವರ್ಷದ ಬಳಿಕ ಹೆತ್ತಮ್ಮನ ಮಡಿಲು ಸೇರಿದ್ದಾಳೆ.
ನಾಗಮಣಿ ಹಾಗೂ ಕೃಷ್ಣ ದಂಪತಿಗಳಿಗೆ ಮೂವರು ಹೆಣ್ಣು ಮಕ್ಕಳಿದ್ದರು. ಇವರು ಆಂಧ್ರ ಪ್ರದೇಶದ ಕೃಷ್ಣಾ ಜಿಲ್ಲೆಯ ಪಟತಿರೂರು ನಗರದಲ್ಲಿ ವಾಸವಾಗಿದ್ದರು. 10 ವರ್ಷಗಳ ಹಿಂದೆ ಕುಡಿದ ನಶೆಯಲ್ಲಿ ಹೆಂಡತಿ ಜತೆ ಜಗಳ ಮಾಡಿದ್ದ ಗಂಡ ಮೂರು ಹೆಣ್ಣು ಮಕ್ಕಳನ್ನ ಬೇರೆ ಬೇರೆ ಪ್ರದೇಶಗಳಲ್ಲಿ ಬಿಟ್ಟು ಬಂದಿದ್ದ. ಎರಡು ಮಕ್ಕಳು ಕೆಲವೇ ದಿನಗಳಲ್ಲಿ ಮರಳಿ ತಾಯಿ ಗೂಡು ಸೇರಿಕೊಂಡಿದ್ದವು.
10 ವರ್ಷಗಳ ಬಳಿಕ ತಾಯಿ ಮಡಿಲು ಸೇರಿದ ಮಗಳು ಆದರೆ ಕೊನೆಯ ಮಗಳು ಅಮೂಲ್ಯ ಮಾತ್ರ ಸಿಕ್ಕಿರಲಿಲ್ಲ. ಕಾಣೆಯಾಗಿ 10 ವರ್ಷಗಳ ಬಳಿಕ ಇದೀಗ ತಾಯಿ ಮಡಿಲು ಸೇರಿಕೊಂಡಿದ್ದಾಳೆ. ಕಾಣೆಯಾಗಿದ್ದ ಬಾಲಕಿ ಮಚಲಿಪಟ್ಟಣಂನ ಮಕ್ಕಳ ಆರೈಕೆ ಕೇಂದ್ರದಲ್ಲಿ ಬೆಳೆದಿದ್ದು, 1ನೇ ತರಗತಿಯಿಂದ 7ನೇ ಕ್ಲಾಸ್ವರೆಗೆ ವ್ಯಾಸಂಗ ಮಾಡಿದ್ದಾಳೆ. ತದನಂತರ 8ನೇ ತರಗತಿಯಿಂದ ಕಸ್ತೂರ ಬಾ ಗಾಂಧಿ ಗರ್ಲ್ಸ್ ಶಾಲೆಯಲ್ಲಿ ವ್ಯಾಸಂಗ ಆರಂಭಿಸಿ, ಸದ್ಯ 12ನೇ ತರಗತಿಯಲ್ಲಿ ಶಿಕ್ಷಣ ಪಡೆದುಕೊಳ್ಳುತ್ತಿದ್ದಾಳೆ.
ಆದರೆ ಕಳೆದ ಮಾರ್ಚ್ ತಿಂಗಳಲ್ಲಿ ಲಾಕ್ಡೌನ್ ಕಾರಣ ಶಾಲೆಯ ಹಾಸ್ಟೆಲ್ ಬಂದ್ ಮಾಡಲಾಗಿದೆ. ಇದಾದ ಬಳಿಕ ಶಾಲೆಯ ಶಿಕ್ಷಕಿ ರಾಜ್ಯಲಕ್ಷ್ಮೀ ತಮ್ಮ ಮನೆಯಲ್ಲಿ ಅಮೂಲ್ಯಗೆ ಆಶ್ರಯ ನೀಡಿದ್ದಾರೆ. ಇದರ ಬೆನ್ನಲ್ಲೇ ಮತ್ತೋರ್ವ ಶಿಕ್ಷಕಿ ಅನುರಾಧಾ ಈ ಬಾಲಕಿ ಚಿಕ್ಕವಳಿದ್ದಾಗ ಪಟತಿರೂರು ಪ್ರದೇಶದಲ್ಲಿದ್ದಳು ಎಂದು ಮಾಹಿತಿ ನೀಡಿದ್ದಾರೆ. ತಕ್ಷಣವೇ ಅನುರಾಧಾ ಪತಿ ಕೇಶವ್ ರಾವ್ ಅವರು ಬಾಲಕಿ ಜತೆ ಹುಡುಕಾಟ ನಡೆಸಿದ್ದಾಗ ತಾಯಿ ನಾಗಮಣಿ ಆಕೆಯನ್ನು ಗುರುತಿಸಿದ್ದಾಳೆ.
ಒಟ್ಟು 10 ವರ್ಷಗಳ ಬಳಿಕ ತಾಯಿ-ಮಗಳು ಪರಸ್ಪರ ಸೇರಿದ್ದು, ಸಂತೋಷದಲ್ಲಿ ಭಾವುಕರಾಗಿದ್ದಾರೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಶಾಲೆಯ ಆಡಳಿತ ಮಂಡಳಿ ಉನ್ನತ ಅಧಿಕಾರಿಗಳ ಗಮನಕ್ಕೆ ತರುವುದಾಗಿ ಮಾಹಿತಿ ನೀಡಿದ್ದಾರೆ.