ನವದೆಹಲಿ:ಜುಲೈ 31ರ ವೇಳೆಗೆ ದೆಹಲಿಯಲ್ಲಿ 5.5 ಲಕ್ಷ ಕೊರೊನಾ ಪ್ರಕರಣಗಳು ದಾಖಲಾಗಲಿವೆ ಎಂದು ದೆಹಲಿ ಡಿಸಿಎಂ ಮನೀಶ್ ಸಿಸೋಡಿಯಾ ಆತಂಕ ವ್ಯಕ್ತಪಡಿಸಿದ್ದಾರೆ. ಆದ್ರೆ ದೆಹಲಿಯಲ್ಲಿ ಕೋವಿಡ್ ಸಮುದಾಯಕ್ಕೆ ಹರಡುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ದೆಹಲಿಯಲ್ಲಿಂದು ನಡೆದ ಡಿಡಿಎಂಎ (ದೆಹಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ) ಸಮಾವೇಶದ ಬಳಿಕ ಮಾತನಾಡಿದ ಅವರು, ಕೊರೊನಾ ಸೋಂಕಿತರಿಗಾಗಿ ಜುಲೈ ಅಂತ್ಯದ ವೇಳೆಗೆ ರಾಷ್ಟ್ರ ರಾಜಧಾನಿಯ ಆಸ್ಪತ್ರೆಗಳಲ್ಲಿ ಕನಿಷ್ಠ 80 ಸಾವಿರ ಬೆಡ್‌ಗಳ ಅವಶ್ಯಕತೆ ಇದೆ. ಈ ತಿಂಗಳ 15ರ ವೇಳೆಗೆ 44 ಸಾವಿರ ಕೋವಿಡ್ ಪ್ರಕರಣಗಳು ದಾಖಲಾಗುತ್ತವೆ ಎಂದು ಹೇಳಿದ್ದಾರೆ.
ಆಸ್ಪತ್ರೆಗಳಲ್ಲಿ ಕನಿಷ್ಠ 6,600 ಬೆಡ್‌ಗಳು ಇರಬೇಕು. ಈ ತಿಂಗಳ 30ರ ವೇಳೆಗೆ ಸೋಂಕಿತರ ಸಂಖ್ಯೆ 1 ಲಕ್ಷಕ್ಕೆ ಏರಿಕೆಯಾಗಲಿದೆ. ಸದ್ಯಕ್ಕೆ ಆಸ್ಪತ್ರೆಗಳಲ್ಲಿ 15 ಸಾವಿರ ಬೆಡ್‌ಗಳ ಅವಶ್ಯಕತೆ ಇರುತ್ತದೆ. ಜುಲೈ 15ರ ವೇಳೆಗೆ 2.15 ಲಕ್ಷ, ಜುಲೈ 31ರ ವೇಳೆಗೆ 5.5 ಲಕ್ಷ ಪ್ರಕರಣಗಳು ದಾಖಲಾಗುತ್ತವೆ. ಈ ವೇಳೆಗಾಗಲೇ 80 ಸಾವಿರ ಬೆಡ್‌ಗಳ ಅವಶ್ಯಕತೆ ಇರುತ್ತದೆ. ಮುಂಬರುವ ದಿನಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇರುತ್ತದೆ ಎಂದಿದ್ದಾರೆ.
ಆಸ್ಪತ್ರೆಗಳಲ್ಲಿ ದೆಹಲಿ ಜನರಿಗೆ ಮಾತ್ರ ಚಿಕಿತ್ಸೆ ನೀಡಬೇಕು ಎಂದು ಸಚಿವ ಸಂಪುಟ ನಿರ್ಣಯ ಕೈಗೊಂಡಿತ್ತು. ಆದ್ರೆ ಇದಕ್ಕೆ ವಿರುದ್ಧವಾಗಿ ಲೆಫ್ಟಿನೆಂಟ್ ಗವರ್ನರ್ ಆದೇಶ ನೀಡಿದ್ದಾರೆ ಎಂದು ಉಪ ಮುಖ್ಯಮಂತ್ರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಮ್ಮ ಆದೇಶವನ್ನು ಮತ್ತೊಮ್ಮೆ ಪರಿಶೀಲನೆ ಮಾಡುವ ಯೋಜನೆಯಲ್ಲಿ ಅವರಿಲ್ಲ ಎಂದು ಹೇಳಿದ್ದಾರೆ.