ಬೆಂಗಳೂರು:14 ದಿನಗಳಲ್ಲಿ ಮತ್ತೆವಿಕ್ರಮ್ ಲ್ಯಾಂಡರ್ ಸಂಪರ್ಕಿಸಲು ಪ್ರಯತ್ನಿಸುತ್ತೇವೆ ಎಂದು ಇಸ್ರೋ ಅಧ್ಯಕ್ಷ ಕೆ.ಸಿವನ್ ಹೇಳಿದ್ದಾರೆ.
ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಮಾತನಾಡಿರುವ ಅವರು, ಚಂದ್ರಯಾನ-2 ವಿಜ್ಞಾನ ಮತ್ತು ತಾಂತ್ರಿಕ ಪ್ರದರ್ಶನ ಎಂಬ ಎರಡು ಉದ್ದೇಶಗಳನ್ನ ಹೊಂದಿತ್ತು. ವಿಜ್ಞಾನದ ಭಾಗವಾಗಿ ಆರ್ಬಿಟರ್ ಈಗಾಗಲೇ ಅದರ ಉದ್ದೇಶಿತ ಕಕ್ಷೆಯಲ್ಲಿ ಯಶಸ್ವಿಯಾಗಿ ಪ್ರದಕ್ಷಿಣೆ ಹಾಕುತ್ತಿದೆ.
ಇನ್ನು ತಾಂತ್ರಿಕ ಪ್ರದರ್ಶನದ ಭಾಗವಾದ ಲ್ಯಾಂಡಿಂಗ್ ಮತ್ತು ರೋವರ್ನ ನೋಡುವುದಾದರೆ ಕೊನೇ ಕ್ಷಣದಲ್ಲಿ ಸಂಪರ್ಕ ಸಾಧ್ಯವಾಗಲಿಲ್ಲ. ಆದರೂ ಈ ಚಂದ್ರಯಾನ-2 ಮಿಷನ್ 100 ರಷ್ಟು ಯಶಸ್ಸು ಸಾಧಿಸಲಿದೆ ಎಂದು ಹೇಳಲು ಇಚ್ಛಿಸುತ್ತೇನೆ ಎಂದಿದ್ದಾರೆ.
ಚಂದ್ರನ ಸುತ್ತ ಸುತ್ತುತ್ತಿರುವ ಆರ್ಬಿಟರ್ ಮುಂದಿನ 14 ದಿನಗಳಲ್ಲಿ ಲ್ಯಾಂಡರ್ಗೆ ನೇರವಾದ ಸ್ಥಾನಕ್ಕೆ ಬರಲಿದೆ. ಆಗ ಆರ್ಬಿಟರ್ ಮುಲಕ ವಿಕ್ರಮ್ ಲ್ಯಾಂಡರ್ನ ಸಂಪರ್ಕಿಸಲು ಪ್ರಯತ್ನಿಸಿ ಏನಾಗಿದೆ ಎಂಬ ಮಾಹಿತಿ ಪಡೆಯುವ ಪ್ರಯತ್ನ ಮಾಡುತ್ತೇವೆ ಎಂದಿದ್ದಾರೆ.
ಅಲ್ಲದೆ ಆರ್ಬಿಟರ್ ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸುತ್ತಿದೆ. ಆರ್ಬಿಟರ್ ಉದ್ದೇಶಿತ ಒಂದು ವರ್ಷಕ್ಕೆ ಬದಲಾಗಿ 7 ವರ್ಷಕ್ಕೂ ಹೆಚ್ಚು ಕಾಲ ಕಾರ್ಯನಿರ್ವಹಿಸುತ್ತದೆ. ಹೀಗಾಗಿ ಚಂದ್ರನ ಅಧ್ಯಯನಕ್ಕೆ ಸಾಕಷ್ಟು ಸಹಕಾರಿಯಾಗಲಿದೆ. ಅದರಲ್ಲಿರುವ ಅತ್ಯತ್ತಮ ಗುಣಮಟ್ಟದ ಕ್ಯಾಮರಾದಿಂದ ತೆಗೆಯಲ್ಪಡುವ ಚಿತ್ರಗಳು ಜಾಗತಿಕ ವಿಜ್ಞಾನಕ್ಕೆ ಸಾಕಷ್ಟು ಅನುಕೂಲವಾಗಲಿದೆ ಎಂದಿದ್ದಾರೆ.
ಬೆಳಗ್ಗೆ ಪ್ರಧಾನಿ ಮೋದಿ ಒಂದು ಮಾತು ಹೇಳಿದ್ರು. ವಿಜ್ಞಾನವನ್ನ ಫಲಿತಾಂಶದ ದೃಷ್ಟಿಯಿಂದ ನೋಡಬಾರದು, ಒಂದು ಪ್ರಯೋಗವಾಗಿ ನೋಡಬೇಕು. ಈ ಪ್ರಯೋಗ ಫಲಿತಾಂಶಕ್ಕೆ ದಾರಿಯಾಗುತ್ತೆ ಎಂದು ಹೇಳಿದರು. ಇದು ನಮ್ಮೆಲ್ಲರಲ್ಲಿ ಮತ್ತಷ್ಟು ಸ್ಫೂರ್ತಿ ತುಂಬಿದೆ. ಇಂದಿನ ಫಲಿತಾಂಶ ನಮ್ಮ ಯಾವುದೇ ಕಾರ್ಯದ ಮೇಲೆ ಪರಿಣಾಮ ಬೀರಲು ಸಾಧ್ಯವಿಲ್ಲ. ನಮ್ಮಲ್ಲಿ ಈಗಾಗಲೇ ಗಗನಯಾನ ಸೇರಿದಂತೆ ಸಾಕಷ್ಟು ಯೋಜನೆಗಳಿವೆ. ಆ ಯಾವುದೇ ಯೋಜನೆಗಳ ಮೇಲೆ ಇದು ಅಡ್ಡ ಪರಿಣಾಮ ಬೀರುವುದಿಲ್ಲ ಎಂದಿದ್ದಾರೆ.