ಪಣಜಿ(ಗೋವಾ): ಕೊರೊನಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯ ದೃಷ್ಟಿಯಿಂದ ಚರ್ಚ್‌ನ ಪ್ರಾರ್ಥನೆಯಲ್ಲಿ ಏಸುವಿನ ಆರಾಧಕರ ಭಾಗವಹಿಸುವಿಕೆ ಇಲ್ಲದೆ ಮೊದಲ ಬಾರಿಗೆ ಗುಡ್ ಫ್ರೈಡೆ ಮತ್ತು ಈಸ್ಟರ್ ಆಚರಣೆ ನಡೆಯಲಿವೆ.
ಮಾರಣಾಂತಿಕ ವೈರಸ್ ಹರಡಿ ದೇಶಾದ್ಯಂತ ಲಾಕ್ಡೌನ್ ಘೋಷಿಸಿರುವ ಹಿನ್ನೆಲೆಯಲ್ಲಿ ಗೋವಾದಲ್ಲಿನ ಚರ್ಚ್ಗಳಿಗೆ ಭಕ್ತರು ಬರುವುದನ್ನು ತಡೆ ಹಿಡಿಯಲಾಗಿದೆ. ಅಲ್ಲದೆ ಚರ್ಚ್ಗಳಲ್ಲಿ ನಡೆಯುವ ಪ್ರಾರ್ಥನೆಯನ್ನು ಫೇಸ್‌ಬುಕ್ ಸೇರಿದಂತೆ ಇತರ ಸಾಮಾಜಿಕ ಮಾಧ್ಯಮಗಳ ಮೂಲಕ ಭಕ್ತರಿಗೆ ನೇರಪ್ರಸಾರ ಮಾಡಲಾಗುತ್ತಿದೆ.
ಕ್ರಿಶ್ಚಿಯನ್ ಧರ್ಮದ ಇತಿಹಾಸದಲ್ಲೇ ಮೊದಲ ಬಾರಿಗೆ ಈ ವರ್ಷ ಚರ್ಚ್ನಲ್ಲಿ ಏಸುವಿನ ಭಕ್ತರು ಭೌತಿಕವಾಗಿ ಹಾಜರಾಗದೆ, ಗುಡ್ ಫ್ರೈಡೆ ಮತ್ತು ಈಸ್ಟರ್ ಆಚರಣೆಯನ್ನು ನಡೆಸಲಾಗುತ್ತಿದೆ ಎಂದು ಗೋವಾ ಚರ್ಚ್‌ನ ಸಾಮಾಜಿಕ ವಿಭಾಗದ ನಿರ್ದೇಶಕ ಫಾದರ್ ಮಾವೆರಿಕ್ ಫರ್ನಾಂಡಿಸ್ ತಿಳಿಸಿದ್ದಾರೆ.
ಚರ್ಚ್ನಲ್ಲಿ ನಡೆಯಬೇಕಾಗಿರುವ ಕಾರ್ಯಕ್ರಮಗಳು ವೇಳಾಪಟ್ಟಿಯಂತೆ ನಡೆಯುತ್ತವೆ. ಆದರೆ ಜನರ ಭಾಗವಹಿಸುವಿಕೆ ಇರುವುದಿಲ್ಲ. ಚರ್ಚ್ ಪಾದ್ರಿಗಳು ತಮ್ಮ ಚರ್ಚ್ಗಳಲ್ಲಿ ನಡೆಯುವ ಪ್ರಾರ್ಥನೆಗಳನ್ನು ಸಾಮಾಜಿಕ ಮಾಧ್ಯಮಗಳ ಮೂಲಕ ನೇರ ಪ್ರಸಾರ ಮಾಡುತ್ತಾರೆ. ಭಕ್ತರ ಸಂಖ್ಯೆ ಹೆಚ್ಚು ಇಲ್ಲದಿರುವುದು ಆಚರಣೆಯ ಉತ್ಸಾಹಕ್ಕೆ ಧಕ್ಕೆ ತರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.