ಮುಂಬೈ:ಬಂಜೆತನ ನಿವಾರಣೆಗೆ ಚಿಕಿತ್ಸೆ ಪಡೆದುಕೊಳ್ಳಲು ಇಲ್ಲಿನ ಜೆಜೆ ಆಸ್ಪತ್ರೆಗೆ ದಾಖಲಾಗಿದ್ದ 29 ವರ್ಷದ ಯುವಕನ ದೇಹದಲ್ಲಿ ಪುರುಷ ಸಂತಾನೋತ್ಪತ್ತಿ ಅಂಗಗಳ ಜತೆ ಸ್ತ್ರೀ ಸಂತಾನೋತ್ಪತ್ತಿ ಅಂಗಗಳು ಕಂಡು ಬಂದಿದ್ದು ಅಚ್ಚರಿಗೆ ಕಾರಣವಾಗಿದೆ.
ಜೂನ್ 26ರಂದು ಜೆಜೆ ಆಸ್ಪತ್ರೆ ವೈದ್ಯರು ಯುವಕನ ದೇಹದಲ್ಲಿದ್ದ ಕಾರ್ಯನಿರ್ವಹಣೆ ಮಾಡದ ಗರ್ಭ, ಹೆಣ್ಣಿನ ಜನನಾಂಗ ಹೋಲುವ ಭಾಗ, ಫಾಲೋಪಿಯನ್ ಟ್ಯೂಬ್ ಮತ್ತು ಸರ್ವಿರ್ಕ್ಸ್ ತೆಗೆದು ಹಾಕಿದ್ದಾರೆ. ಆದರೆ ಈತನಿಗೆ ಯಾವುದೇ ಕಾರಣಕ್ಕೂ ಮಕ್ಕಳಾಗುವುದಿಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ಎರಡು ವರ್ಷಗಳ ಹಿಂದೆ ಮದುವೆಯಾದ ವ್ಯಕ್ತಿಗೆ ಮಕ್ಕಳಾಗದ ಕಾರಣ ಆಸ್ಪತ್ರೆಗೆ ಪತ್ನಿ ಸಮೇತ ತಪಾಸಣೆಗಾಗಿ ಆಗಮಿಸಿದ್ದಾರೆ. ಈ ವೇಳೆ ಪರೀಕ್ಷೆ ನಡೆಸಿರುವ ವೈದ್ಯರು ಆತ ದೈಹಿಕವಾಗಿ ಸದೃಢವಾಗಿದ್ದಾನೆ ಎಂದು ತಿಳಿಸಿದ್ದಾರೆ. ಆದರೆ ಆತನ ವೃಷಣದ ಚೀಲಗಳು ಹೊಟ್ಟೆಯಲ್ಲಿರುವುದನ್ನು ಸ್ಕ್ಯಾನಿಂಗ್ ಮೂಲಕ ಕಂಡು ಹಿಡಿದಿದ್ದಾರೆ. ಅತ್ಯಂತ ಅಪರೂಪದ ಪ್ರಕರಣಗಳಲ್ಲಿ ಈ ಬೆಳವಣಿಗೆ ಕಂಡುಬರುತ್ತವೆ ಎಂದು ವೈದ್ಯರು ತಿಳಿಸಿದ್ದಾರೆ.
ಅನಪೇಕ್ಷಿತ ವೃಷಣಗಳು ಹೊಟ್ಟೆಯಲ್ಲಿರುವುದರಿಂದ ಕ್ಯಾನ್ಸರ್ ರೋಗದ ಅಪಾಯ ಹೆಚ್ಚಾಗಿರುತ್ತದೆ ಎಂದರಿತ ತಂಡ ಶಸ್ತ್ರಚಿಕಿತ್ಸೆ ನಡೆಸಲು ಮುಂದಾಗಿದೆ. ಆದ್ರೆ, ಶಸ್ತ್ರಚಿಕಿತ್ಸೆಗೆ ಮುಂದಾದ ವೈದ್ಯರಿಗೆ ಅಚ್ಚರಿ ಕಾದಿತ್ತು. ಏಕೆಂದರೆ ಪುರುಷನ ಹೊಟ್ಟೆಯಲ್ಲಿ ಮಹಿಳಾ ಗರ್ಭಾಶಯ ಕಂಡು ಬಂದಿದೆ! ಈ ವೇಳೆ ತಕ್ಷಣ ಶಸ್ತ್ರಚಿಕಿತ್ಸೆ ನಿಲ್ಲಿಸಿ ಎಂಆರ್ಐ ಸ್ಕ್ಯಾನ್ಗೆ ಕಳುಹಿಸಿದಾಗ ಪುರುಷರ ಗರ್ಭಾಶಯದಂತೆ ಮಹಿಳಾ ಗರ್ಭಾಶಯ ಇರುವುದು ಪತ್ತೆಯಾಗಿದೆ. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಅದನ್ನು ಹೊರ ತೆಗೆದಿರುವುದಾಗಿ ತಿಳಿಸಿದ್ದು, ಕೆಲ ದಿನಗಳಲ್ಲಿ ಆತನನ್ನ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗುವುದು ಎಂದಿದ್ದಾರೆ.