ಬುಲ್ದಾನ : ಮನುಷ್ಯರ ಹಿನ್ನೆಲೆ ಕಂಡು ಹಿಡಿಯಲು ಡಿಎನ್ಎ ಪರೀಕ್ಷೆ ನಡೆಸುವುದನ್ನು ನೀವೆಲ್ಲ ಕೇಳಿರುತ್ತೀರಾ. ಆದರೆ, ಪ್ರಾಣಿಗಳಿಗೆ ಡಿಎನ್ಎ ಟೆಸ್ಟ್ ಮಾಡಿಸುವುದನ್ನು ಯಾವತ್ತಾದರೂ ಕೇಳಿದ್ದೀರಾ..? ಖಂಡಿತವಾಗಿಯೂ ಇಲ್ಲ ಅನಿಸುತ್ತೆ. ಆದರೆ, ಇಂತಹದ್ದೊಂದು ಪ್ರಯತ್ನಕ್ಕೆ ಮಹಾರಾಷ್ಟ್ರದ ಬುಲ್ದಾನ ಪೊಲೀಸರು ಮುಂದಾಗಿದ್ದಾರೆ.
ಬುಲ್ಡಾನ ತಾನಾಜಿ ನಗರದ ಪತಂಗಾ ಮಚ್ಚಿ ಲೇಔಟ್ ಬಳಿ ನಿತ್ಯ ಮಧ್ಯಾಹ್ನದ ವೇಳೆ ದನ ಕರುಗಳು ವಿಶ್ರಾಂತಿ ಪಡೆಯುತ್ತವೆ. ಸೆ.9 ರಂದು ಜಾನುವಾರುಗಳು ವಿಶ್ರಾಂತಿ ಪಡೆಯುವಾಗ, ಅಫ್ರೋಝ್ ಬಗ್ಬಾನ್ ಎಂಬ ವ್ಯಕ್ತಿ, ಸುಮಾರು 3 ವರ್ಷದ ಕರುವೊಂದನ್ನು ಟ್ರಕ್ನಲ್ಲಿ ತುಂಬಿ ಕೊಂಡೊಯ್ಯಲು ಯತ್ನಿಸಿದ್ದ. ಇದನ್ನು ಗಮನಿಸಿದ ಪ್ರದೀಪ್ ಎಂಬಾತ, ಕರುವನ್ನು ಯಾಕೆ ಕೊಂಡೊಯ್ಯುತ್ತೀದ್ದಿ..? ಎಂದು ಪ್ರಶ್ನಿಸಿದ್ದಾನೆ. ಈ ವೇಳೆ ಅಫ್ರೋಜ್ ಈ ಕರು ನಂದು ಎಂದಿದ್ದಾನೆ. ಆದರೆ, ಇದಕ್ಕೆ ಒಪ್ಪದ ಪ್ರದೀಪ್, ಇಲ್ಲಾ ಈ ಕರು ನನಗೆ ಸೇರಿದ್ದು ಎಂದು ವಾದಿಸಿದ್ದಾನೆ. ಇಬ್ಬರ ಗಲಾಟೆ ಜೋರಾದಾಗ ಸ್ಥಳಕ್ಕೆ ಬಂದ ಸ್ಥಳೀಯರು, ಪೊಲೀಸರಿಗೆ ಮಾಹಿತಿ ನೀಡಿದ್ದರು.
ಪಶುವೈದ್ಯಕೀಯ ಸಹಾಯಕ ಆಯುಕ್ತರಿಗೆ ಪತ್ರ ಬರೆದ ಪೊಲೀಸರು ಸ್ಥಳಕ್ಕೆ ಬಂದ ಪೊಲೀಸರು ವಿಚಾರಿಸಿದಾಗ, ಇಬ್ಬರೂ ಇದು ನಮಗೆ ಸೇರಿದ ಕರು ಎಂದು ಪಟ್ಟು ಹಿಡಿದಿದ್ದಾರೆ. ಅಲ್ಲದೇ, ಈ ಕರುವಿನ ತಾಯಿ ಹಸು ನಮ್ಮ ಬಳಿ ಇದೆ ಎಂದಿದ್ದಾರೆ. ಸಮಸ್ಯೆಯನ್ನು ಇಥ್ಯರ್ತಪಡಿಸಲು ಎಷ್ಟೇ ಪ್ರಯತ್ನಿಸಿದರೂ ವಿಫಲವಾದ ಹಿನ್ನೆಲೆ, ಕೊನೆಗೆ ಪೊಲೀಸರು ಕರುವಿಗೆ ಡಿಎನ್ಎ ಟೆಸ್ಟ್ ಮಾಡಿಸಲು ಮುಂದಾಗಿದ್ದಾರೆ. ಇಬ್ಬರ ಬಳಿಯಿರುವ ಕರುವಿನ ತಾಯಿ ಎಂದು ಹೇಳುತ್ತಿರುವ ಹಸುಗಳು ಮತ್ತು ಕರುವಿನ ಸ್ಯಾಂಪಲ್ಸ್ ಪಡೆದು ಡಿಎನ್ಎ ಟೆಸ್ಟ್ ಮಾಡಿಸಲು ಪೊಲೀಸರು ತೀರ್ಮಾನಿಸಿದ್ದಾರೆ. ಡಿಎನ್ಎ ಯಾವ ಹಸುವಿಗೆ ಸರಿ ಹೊಂದುತ್ತೋ ಕರು ಅವರಿಗೆ ಸೇರಿದ್ದು ಎಂದು ಇಬ್ಬರಿಗೂ ತಿಳಿಸಲಾಗಿದೆ.
ಕರುವಿನ ಡಿಎನ್‌ಎ ಪಡೆಯಲು ಬುಲ್ದಾನಾ ಪೊಲೀಸ್ ಅಧಿಕಾರಿ ಥನೇದಾರ್ ಸಲುಂಖೆ, ಸೆಪ್ಟೆಂಬರ್ 23 ರಂದು ಬುಲ್ಡಾನಾ ಪಶುವೈದ್ಯಕೀಯ ಸಹಾಯಕ ಆಯುಕ್ತರಿಗೆ ಪತ್ರ ಬರೆದಿದ್ದಾರೆ. ನಾವು ಸ್ಯಾಂಪಲ್ ತೆಗೆದುಕೊಂಡು ಅದನ್ನು ಮೊಹರು ಮಾಡಿ ನಮ್ಮ ವಶಕ್ಕೆ ತೆಗೆದುಕೊಳ್ಳುತ್ತೇವೆ. ಡಿಎನ್‌ಎ ಪರೀಕ್ಷೆಗೆ ಬುಲ್ಡಾನದಲ್ಲಿ ಯಾವುದೇ ವ್ಯವಸ್ಥೆ ಇಲ್ಲದ ಕಾರಣ, ಅದನ್ನು ಹೈದರಾಬಾದ್ಗೆ ಕಳುಹಿಸಲಾಗುತ್ತದೆ. ಡಿಎನ್ಎ ವರದಿ ಬಂದ ಬಳಿಕ ಕರುವಿನ ನಿಜವಾದ ಮಾಲೀಕರನ್ನು ನಿರ್ಧರಿಸಲಾಗುತ್ತದೆ. ಡಿಎನ್‌ಎ ವರದಿ ಬರುವ ತನಕ, ಕರುವನ್ನು ಯೆಲ್ಗಾಂವ್ನ ಶೆಡ್ನಲ್ಲಿ ಇಡಲಾಗಿದೆ ಎಂದು ಸಲುಂಖೆ ತಿಳಿಸಿದ್ದಾರೆ.