ನಾಗೌರ್ (ರಾಜಸ್ಥಾನ):ರಾಜಸ್ಥಾನದ ನಾಗೌರ್ ಜಿಲ್ಲೆಯಲ್ಲಿ ವೃದ್ಧರೊಬ್ಬರ ಸಾವಿನ ಹಿನ್ನೆಲೆ ಎರಡು ದಿನಗಳ ಕಾಲ ಧರಣಿ ನಡೆಸಿ, ತಪ್ಪಿತಸ್ಥರನ್ನು ಬಂಧಿಸಿದ ಬಳಿಕವೇ, ಮೃತರ ಕುಟುಂಬ ಸದಸ್ಯರು ಮತ್ತು ಇತರ ಸಮುದಾಯದ ಸದಸ್ಯರು ತಮ್ಮ ಪ್ರತಿಭಟನೆ ಕೊನೆಗೊಳಿಸಲು ನಿರ್ಧರಿಸಿ ಹೋರಾಟದಲ್ಲಿ ಯಶಸ್ಸು ಕಂಡಿದ್ದಾರೆ.
ಜೂನ್ 24ರಂದು ಸಾವಂತ್‌ಗಡ್ ಗ್ರಾಮದ ರಸ್ತೆಯೊಂದರ ಅತಿಕ್ರಮಣದ ವಿವಾದದಿಂದಾಗಿ ಹನುಮಾನ್ ಮೇಘವಾಲ್ ಎಂಬ ವೃದ್ಧನ ಮೇಲೆ ಕೆಲವರು ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಮೇಘವಾಲ್ ಅವರನ್ನು ಚಿಕಿತ್ಸೆಗಾಗಿ ಜೈಪುರಕ್ಕೆ ಕರೆದೊಯ್ಯಲಾಯಿತಾದರೂ ದಾರಿಯಲ್ಲಿ ಅವರು ಮೃತಪಟ್ಟಿದ್ದರು.
ಕುಟುಂಬದ ದೂರಿನ ಆಧಾರದ ಮೇಲೆ, ಮರೋತ್ ಪೊಲೀಸ್ ಠಾಣೆಯಲ್ಲಿ ಸುಮಾರು 12 ಜನರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ. ಮೃತ ವ್ಯಕ್ತಿಯ ಶವವನ್ನು ನವಾನ್‌ನ ಸರ್ಕಾರಿ ಆಸ್ಪತ್ರೆಯಲ್ಲಿ ಇಡಲಾಗಿತ್ತು. ನಂತರ ಮೃತರ ಸಂಬಂಧಿಕರು ಮತ್ತು ಇತರ ಸಮುದಾಯದ ಸದಸ್ಯರು ಎಸ್‌ಡಿಎಂ ಕಚೇರಿಯ ಹೊರಗೆ ಧರಣಿ ಕುಳಿತರು. ಆರೋಪಿಗಳನ್ನು ತಕ್ಷಣವೇ ಬಂಧಿಸಬೇಕು ಮತ್ತು ರಸ್ತೆ ತೆರವುಗೊಳಿಸಬೇಕು ಎಂದು ಪಟ್ಟು ಹಿಡಿದರು.
ಇದೀಗ ಪೊಲೀಸರು ಹಾಗೂ ಸ್ಥಳೀಯಾಡಳಿತದೊಂದಿಗೆ ಮಾತುಕತೆ ಯಶಸ್ವಿಯಾಗಿ, ಮೂವರು ಆರೋಪಿಗಳನ್ನು ಬಂಧಿಸಿದ ಬಳಿಕ ಪ್ರತಿಭಟನಾಕಾರರು ತಮ್ಮ ಧರಣಿಯನ್ನು ರದ್ದುಗೊಳಿಸಲು ಒಪ್ಪಿದ್ದಾರೆ. ಮೃತ ವ್ಯಕ್ತಿಯ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.